ಫಿಲಿಫೀನ್ಸ್ - 
	ಏಷ್ಯದ ಆಗ್ನೇಯ ತೀರದಿಂದ ಸುಮಾರು 800ಕಿಮೀ. ದೂರದಲ್ಲಿ ಪೆಸಿಫಿಕ್ ಸಾಗರದಲ್ಲಿರುವ ದ್ವೀಪಸ್ತೋಮದಲ್ಲಿ ಸುಮಾರು 7,100 ದ್ವೀಪಗಳಿವೆ ಇವು ಉ. ಅ. 4ಔ 40′―21ಔ ನಡುವೆ ಹರಡಿವೆ. ಫಿಲಿಪೀನ್ಸ್‍ನ ಪಶ್ಚಿಮದಲ್ಲಿ ದಕ್ಷಿಣ ಚೀನ ಸಮುದ್ರ, ಪೂರ್ವದಲ್ಲಿ ಪೆಸಿಫಿಕ್‍ಸಾಗರ, ದಕ್ಷಿಣದಲ್ಲಿ ಸೆಲೆಬೀಸ್ ಸಮುದ್ರ ಇವೆ. ಫಿಲಿಪೀನ್ಸ್‍ನ ಒಟ್ಟು ವಿಸ್ತೀರ್ಣ 2,99,404 ಚ. ಕಿಮೀ ಜನಸಂಖ್ಯೆ 47,914,017 (1980). ಅಧಿಕೃತ ರಾಜಧಾನಿ ಕೇಸಾನ್ ನಗರವಾದರೂ ಮನಿಲ ಆಡಳಿತ ಕೇಂದ್ರವಾಗಿ ಮುಂದುವರಿದಿದೆ. ಎರಡು ನಗರಗಳೂ ಲೂeóÁನ್ ದ್ವೀಪದಲ್ಲಿ ಪಕ್ಕಪಕ್ಕದಲ್ಲಿವೆ.

ಭೌತಿಕ ಭೂವಿವರಣೆ

	ಮೇಲ್ಮೈಲಕ್ಷಣ: ಫಿಲಿಪೀನ್ಸ್ ಸಮಭಾಜಕ ವೃತ್ತಕ್ಕೆ ಉತ್ತರದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಸುಮಾರು 1843 ಕಿಮೀ ಪೂರ್ವದಿಂದ ಪಶ್ಷಿಮಕ್ಕೆ ಸುಮಾರು 1,100 ಕಿಮೀ ಹರಡಿವೆ. ದ್ವೀಪಗಳ ನಡುವೆ ತಕ್ಕಮಟ್ಟಿಗೆ ವಿಸ್ತಾರವಾದ ಹಲವು ಸಮುದ್ರಗಳಿವೆ. ಇವುಗಳ ಪೈಕಿ ಸೂಲೂ, ಮಿಂಡನಾವೊ, ವಿಸೈಯನ್, ಸೀಬುಯಾನ್, ಸಾಮಾರ್ ಮುಖ್ಯವಾದವು. ದ್ವೀಪಗಳ ತೀರಗಳು ಡೊಂಕಾಗಿವೆ. ಮನಿಲ ಕೊಲ್ಲಿ ಲಿಂಗಾಯೆನ್ ಖಾರಿ, ಲೇಟೀ ಖಾರಿ, ಇಲೀಗನ್ ಕೊಲ್ಲಿ, ದಾವೌ ಕೊಲ್ಲಿ ಮುಂತಾದವುಗಳಲ್ಲಿ ಉತ್ತಮ ರೇವುಗಳಿವೆ. ದ್ವೀಪಸ್ತೋಮದ ನಡುವೆ ಹಾಗೂ ದಕ್ಷಿಣ ದ್ವೀಪಗಳ ಅಂಚಿನಲ್ಲಿ ಹವಳದ ದಿಬ್ಬಗಳಿವೆ. ದಕ್ಷಿಣದ ಕಡಲಂಚು ಮತ್ತು ಉತ್ತರ, ಪೂರ್ವ, ಪಶ್ಚಿಮ ದ್ವೀಪಗಳ ನಡುವಣ ಕಡಲ್ಗಾಲುವೆಗಳು ಬಹು ಆಳವಾಗಿವೆ. ಮಿಂಡನಾವೋ ದ್ವೀಪಗಳ ನಡುವಣ ಕಡಲ್ಗಾಲುವೆಗಳು ಬಹು ಆಳವಾಗಿವೆ. ಮಿಂಡನಾವೋ ದ್ವೀಪದ ಉತ್ತರ ತೀರದ ಕಡಲ ಮಡುವಿನ ಆಳ 1,353 ಮೀ. ಪ್ರಪಂಚದ ಆಳವಾದ ಸಮುದ್ರ ಭಾಗಗಳಲ್ಲಿ ಇದೂ ಒಂದು. ಫಿಲಿಪೀನ್ಸ್‍ನಲ್ಲಿ 1,03,475 ಚ. ಕಿಮೀ. ವಿಸ್ತೀರ್ಣದ ದ್ವೀಪದಿಂದ (ಲೂeóÁನ್) ಹಿಡಿದು, ಬಂಡೆಗಳಿಂದ ಕೂಡಿದ ಕಿರುಭೂಪ್ರದೇಶಗಳವರೆಗೆ ದ್ವೀಪಗಳಿವೆ. ಒಟ್ಟು ದ್ವೀಪಗಳ ಪೈಕಿ 2,773ಕ್ಕೆ ಮಾತ್ರ ಹೆಸರುಗಳಿವೆ. 462 ದ್ವೀಪಗಳು ತಲಾ 2.59 ಚ. ಕಿಮೀ. ಉಳ್ಳವು. 730 ದ್ವೀಪಗಳಲ್ಲಿ ಮಾತ್ರ ಜನರು ವಾಸಿಸುತ್ತಾರೆ. ಅನೇಕ ದ್ವೀಪಗಳು ಅಗ್ನಿಪರ್ವÀತಗಳಿಂದ ಕೂಡಿವೆ. 

	ಫಿಲಿಪೀನ್ಸ್ ದ್ವೀಪಗಳನ್ನು ಸ್ಥೂಲವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು; 1 ಲೂಜಾನ್ ಗುಂಪು; ಲೂeóÁನ್. ಮಿಂಡೋರೊ ಮತ್ತು ಅವುಗಳ ಸಮೀಪದ ದ್ವೀಪಗಳು ಉತ್ತರದ ಈ ದ್ವೀಪಗುಚ್ಛಕ್ಕೆ ಸೇರಿವೆ. 2 ವಿಸೈಯನ್ ಗುಂಪು: ಇದರಲ್ಲಿ ಬೋಹಾಲ್, ಸೇಬೂ, ಲೇಟೀ, ಮಾಸ್ಬಾಟೀ, ನೇಗ್ರೋಸ್, ಪಲಾವನ್, ಪನೈ ಮತ್ತು ಸಾಮಾರ್ ಸೇರಿವೆ. 3 ಮಿಂಡನಾವೋ ಗುಂಪು; ದಕ್ಷಿಣ ಭಾಗದಲ್ಲಿರುವ ಈ ಗುಂಪಿನಲ್ಲಿ ಮಿಂಡನಾವೋ ಮತ್ತು ಸೂಲೂ ದ್ವೀಪಸ್ತೋಮ ಸೇರಿವೆ.

	ಫಿಲಿಪೀನ್ಸ್ ದ್ವೀಪಗಳ ಪ್ರದೇಶ ಪಶ್ಚಿಮ ಪೆಸಿಫಿಕ್ ಸಾಗರದ ಅಗ್ನಿಪರ್ವತಗಳ ಶ್ರೇಣಿಗೆ ಸೇರಿದ. ಬಹುತೇಕ ದ್ವೀಪಗಳಲ್ಲಿ ಕರಾವಳಿಗೆ ತೀರ ಹತ್ತಿರದಲ್ಲೇ ಪರ್ವತಗಳು ಹಬ್ಬಿವೆ. ನದಿಗಳು ಸಾಮಾನ್ಯವಾಗಿ ಉತ್ತರಕ್ಕೆ ಹರಿಯುತ್ತವೆ. ದ್ವೀಪಗಳಲ್ಲಿ ಹಲವಾರು ಸರೋವರಗಳಿವೆ. ಪರ್ವತಶ್ರೇಣಿUಳು ಹಾಗೂ ಶಿಖರಗಳಲ್ಲಿ ಪ್ರಧಾನವಾದವು ಇವು. ಲೂeóÁನ್ ದ್ವೀಪದ ಈಶಾನ್ಯನಲ್ಲಿ ಹಬ್ಬಿರುವ ಸೀಯೆರ ಮಾದ್ರೆ ಶ್ರೇಣಿ, ಆಗ್ನೇಯದ ಮಾಯೋನ್ ಅಗ್ನಿಪರ್ವತ (2,316 ಮೀ.) ಉತ್ತರದಲ್ಲಿರುವ ಕಾಗ್ವ ಅಗ್ನಿಪರ್ವತ (1,197 ಮೀ.), ನೇಗ್ರೋಸ್ ದ್ವೀಪದಲ್ಲಿರುವ ಕಾನ್ಲನಾನ್ ಅಗ್ನಿಪರ್ವತ (2,460ಮೀ) ಕಮಿಗ್ವೀನ್ ದ್ವೀಪದಲ್ಲಿರುವ ಕಮಿಗ್ವೀನ್ ಅಗ್ನಿಪರ್ವತ (7,936ಮೀ) ಮತ್ತು ಮಿಂಡನಾವೋ ದ್ವೀಪದ ಅಪೋ ಅಗ್ನಿಪರ್ವತ (2,954ಮೀ.) ಆಪೋ ಫಿಲಿಫೀನ್ಸಿನ ಅತ್ಯುನ್ನತ ಶಿಖರ.

	ಮಿಂಡನಾವೋ, ಲೂeóÁನ್ ಮೊದಲಾದ ಪ್ರಮುಖ ದ್ವೀಪಗಲ್ಲಿ ನದಿಗಳು ರಭಸದಿಂದ ಹರಿದು ಸಾಗರವನ್ನು ಸೇರುತ್ತವೆ. ಮಳೆಗಾಲದಲ್ಲಿ ಈ ನದಿಗಳ ಪ್ರವಾಹದಿಂದ ಸುತ್ತಮುತ್ತಲ ಪ್ರದೇಶಗಳು ಮುಳುಗಡೆಯಾಗುವುದೂ ಉಂಟು. ಕೆಲವು ನದಿಗಳಲ್ಲಿ ಮಾತ್ರವೇ ಸಣ್ಣ ದೋಣಿಗಳ ಸಂಚಾರ ಸಾಧ್ಯ. ಫಿಲಿಫೀನ್ಸ್‍ನ ಅತ್ಯಂತ ಉದ್ದವಾದ ನದಿ ಕಾಗಯನ್. ಇದು ಲೂeóÁನ್ ದ್ವೀಪದ ಫಲವತ್ತಾದ ಕಣಿವೆಗಳ ಮೂಲಕ ಉತ್ತರಾಭಿಮುಖವಾಗಿ 352 ಕಿಮೀ. ಹರಿದು ಪೆಸಿಫಿಕ್ ಸಾಗರವನ್ನು ಸೇರುತ್ತದೆ. ಫಿಲಿಫೀನ್ಸ್‍ನ ಇತರ ಮುಖ್ಯ ನದಿಗಳು ಲೂeóÁನ್ ದ್ವೀಪದ ಆಗ್ನೋ ಮತ್ತು ಪಾಂಪಾಂಗ, ಮತ್ತು ಮಿಂಡನಾವೋ ದ್ವೀಪದ ಆಗೂಸಾನ್.

	ಫಿಲಿಫೀನ್ಸ್‍ನ ಅತ್ಯಂತ ದೊಡ್ಡ ಸರೋವರ ಮನಿಲ ನಗರದ ಆಗ್ನೇಯಕ್ಕಿರುವ ಲಗೂನ ದಬೈ. ಮಿಂಡನಾವೋ ದ್ವೀಪದಲ್ಲಿ ಲನಾವು ಮತ್ತು ಮೇಯೀನಿಟ್ ಸರೋವರಗಳು ಮುಖ್ಯವಾದವು.

	ವಾಯುಗುಣ: ಮಧ್ಯ ಅಮೆರಿಕದಲ್ಲಿರುವಂತೆ ಕಡಲ ನೆರೆಯ ಹಾಗೂ ಉಷ್ಣವಲಯದ ವಾಯುಗುಣ ಇಲ್ಲಿಯದು. ಮಳೆಗಾಲ, ಒಣಗಾಲ ಹೀಗೆ ಎರಡು ಪ್ರಧಾನ ಋತುಗಳಿವೆ. ಮಳೆ ಅಧಿಕ. ಉಷ್ಣತೆಯಲ್ಲಿ ವರ್ಷದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರುವುದಿಲ್ಲ. ಸರಾಸರಿ ವಾರ್ಷಿಕ ಉಷ್ಣತೆ ಸಾಮಾನ್ಯವಾಗಿ 38˚ಅ ಗಿಂತ ಮೇಲೆ ಹೋಗುವುದಿಲ್ಲ. 21ಔಅ ಗಿಂತ ತಗ್ಗುವುದಿಲ್ಲ. 

	ಮಳೆಗಾಲ ಜೂನ್‍ನಿಂದ ನವೆಂಬರ್ ವರೆಗೆ. ಸಾಗರದಿಂದ ಬರುವ ಮಳೆಯ ಮೋಡಗಳನ್ನು ಬೆಟ್ಟಗಳು ತಡೆಯುವುದರಿಂದ ಕಡಲತೀರದ ತಗ್ಗುಪ್ರದೇಶಗಳಲ್ಲಿ ಮೇಲ್ನಾಡಿಗಿಂತ ಮಳೆ ಅಧಿಕ. ವಾರ್ಷಿಕ ಮಳೆ 1,270-3,572 ಮಿಮೀ.

	ಆಗಸ್ಟ್__ಅಕ್ಟೋಬರ್‍ನಲ್ಲಿ ಪನೈ ದ್ವೀಪದ ಉತ್ತರದಲ್ಲಿ, ಹÉಚ್ಚಾಗಿ ಮನಿಲದ ಉತ್ತರದ ಕಡೆಯ ದ್ವೀಪಭಾಗಗಳಲ್ಲಿ, ಪ್ರಬಲ ಚಂಡಮಾರುತುಗಳು ಬೀಸುತ್ತವೆ. ಅವುಗಳಿಂದ ಅಗಾಧ ಅನಾಹುತಗಳಾಗುತ್ತವೆ. ಅನೇಕ ದ್ವೀಪಗಳು ಭಾರಿ ಭೂಕಂಪಗಳಿಗೂ ಒಳಗಾಗುತ್ತಿರುತ್ತವೆ. ಹೆಚ್ಚು ಭೂಕಂಪಗಳಾಗುವುದು ಮಿಂಡನಾವೋ ದ್ವೀಪದಲ್ಲಿ.

	ಸಸ್ಯಪ್ರಾಣಿ ಜೀವನ: ಫಿಲಿಫೀನ್ಸ್‍ನ ಸಸ್ಯಗಳು ಪ್ರಧಾನವಾಗಿ ಮಲಯ ಪರ್ಯಾಯ ದ್ವೀಪವನ್ನು ಹೋಲುತ್ತವೆ. ಚೀನ ಮತ್ತು ಆಸ್ಟ್ರೇಲಿಯದಲ್ಲಿ ಬೆಳೆಯುವ ಸಸ್ಯಗಳನ್ನೂ ಇಲ್ಲಿ ಕಾಣಬಹುದು. ಇಲ್ಲಿಯ ವೈವಿಧ್ಯ ಗಮನಾರ್ಹ. ಅರ್ಧದಷ್ಟು ಭೂಮಿಯನ್ನು ದಟ್ಟ ಕಾಡುಗಳು ಆಕ್ರಮಿಸಿವೆ. ಕಾಡುಗಳಲ್ಲಿ ಚೌಬೀನೆಗೆ ಯೋಗ್ಯವಾದ ಸುಮಾರು 3,000 ಬಗೆಯ ಮರಗಳಿವೆ. ಮಹಾಗನಿ,ಪೈನ್, ಕರಿಯ ಮರ, ಸಿಡಾರ್, ಆಲ ಮೊದಲಾದವು ಬೆಳೆಯುತ್ತವೆ. ಕರಾವಳಿಯಲ್ಲಿ ತೆಂಗು ಅಧಿಕ. ಬಿದಿರು ಮೆಳೆಗಳು ದಟ್ಟವಾಗಿವೆ. ಅರಣ್ಯಗಳಲ್ಲಿ ಸುಮಾರು 10,000 ಬಗೆಯ ಹೂಗಿಡಗಳಿವೆ.

	ಫಿಲಿಫೀನ್ಸಿನ ವನ್ಯಮೃಗಗಳು ಕೋಡಗ, ಕಾಡುಹಂದಿ, ಜಿಂಕೆ, ಕಸ್ತೂರಿಮೃಗ, ಟಮಾರು ಎಂಬ ಗಿಡ್ಡುಕೋಣ. ನದಿಗಳಲ್ಲಿ 5 ಮೀ.ವರೆಗೂ ಉದ್ದವಿರುವ ಮೊಸಳೆಗಳಿವೆ. ಸರ್ಪದಲ್ಲಿ ನಾನಾ ಬಗೆ. ಭಾರಿ ಹೆಬ್ಬಾವುಗಳು 10 ಮೀ. ಗಳಷ್ಟು ಉದ್ದವಿರುತ್ತವೆ. ಪಾರಿವಾಳ, ಗಿಣಿ, ಕೊಕ್ಕರೆ ಹಾಗೂ ಇತರ ಜಲಚರ ಪಕ್ಷಿಗಳೂ ಸೇರಿ ಸುಮಾರು 750 ಬಗೆಯ ಹಕ್ಕಿಗಳಿವೆ. ಕಡಲ ತೀರಗಳಲ್ಲಿ ತಿಮಿಂಗಿಲ, ಸುಮಾರು 2,000 ಬಗೆಯ ಮೀನುಗಳು ಉಂಟು. ಮೀನುಗಳಲ್ಲಿ ಸಾರ್ಡೈನ್, ಹೆರಿಂಗ್ ಮತ್ತು ಟೂನಾ ಜಾತಿಯ ಮೀನುಗಳು, ಚಿಪ್ಪು ಮೀನುಗಳು, ಏಡಿ, ಸಿಂಪಿ ಅಧಿಕವಾಗಿವೆ. ದ್ವೀಪಸ್ತೋಮದ ದಕ್ಷಿಣಭಾಗದ ದ್ವೀಪಗಳ ಕಡಲ ಜಲದಲ್ಲಿ ಸ್ಪಂಜು ಯಥೇಚ್ಛವಾಗಿ ಬೆಳೆದಿವೆ. ಸೂಲೂ ಪರ್ಯಾಯ ದ್ವೀಪದ ಬಳಿ ಕಡಲ ತಳದಲ್ಲಿ ಹವಳದ ಚಿಪ್ಪುಗಳಿವೆ. 

ಜನಜೀವನ

	ಜನ: ಫಿಲಿಫೀನ್ಸ್ ನಿವಾಸಿಗಳಲ್ಲಿ ಬಹುಮಂದಿ ಫಿಲಿಫೀನೊ-ಮಲೇಷಿಯನ್  ಬುಡಕಟ್ಟಿನವರು. ಕ್ರಿ.ಪೂ. ಸುಮಾರು 200ರಿಂದ ಇವರ ಮೂಲಪುರುಷರು ಆಗ್ನೇಯ ಏಷ್ಯದಿಂದ ಈ ದ್ವೀಪಗಳಿಗೆ ವಲಸೆ ಬರಲಾರಂಭಿಸಿದರು. ಎಣ್ಣೆಗೆಂಪಿನ ಮೈ, ಕಪ್ಪನೆಯ ನೀಳ್ಗೂದಲು, ಚಪ್ಪಟೆಯ ಮೂಗು, ಗಿಡ್ಡನೆಯ ನಯವಾದ ದೇಹ ಇವು ಅಚ್ಚ ಫಿಲಿಫಿನೊ-ಮಲೇಷಿಯನ್ ಜನರ ದೈಹಿಕ ಲಕ್ಷಣ. ಮತದ ದೃಷ್ಟಿಯಿಂದ ಇವರನ್ನು ಕ್ರೈಸ್ತರು, ಮುಸಲ್ಮಾನರು, ಸರ್ವಚೇತನ ಪಂಥದ ಆದಿವಾಸಿಗಳು ಎಂದು ವಿಂಗಡಿಸಬಹುದು. ಕ್ರೈಸ್ತ ಫಿಲಿಫಿನೋ ಮಲೇಷಿಯನ್ ಜನರು ಎಲ್ಲ ದ್ವೀಪಗಳಲ್ಲೂ ಹರಡಿಕೊಂಡಿದ್ದಾರೆ. ಮುಸಲ್ಮಾನರು ಪ್ರಧಾನವಾಗಿ ಮಿಂಡನಾವೋ ದ್ವೀಪ ಮತ್ತು ಸೂಲೂ ದ್ವೀಪಸ್ತೋಮದಲ್ಲಿ ವಾಸವಾಗಿದ್ದಾರೆ. ವಾಯುವ್ಯ ಆಫ್ರಿಕದ ಮೂರ್ಸ್ ಜನರಂತೆ ಈ ದ್ವೀಪವಾಸಿಗಳು ಮುಸಲ್ಮಾನರಾಗಿರುವುದರಿಂದ ಸ್ಪೇನ್ ದೇಶದವರು ಇವರನ್ನು ಮೋರೋಗಳು, ಮೂರ್ಸ್ ಎಂದು ಕರೆದರು. ಮೋರೋಗಳ ಬಣಗಳನ್ನು ಅಡಗಿಸಿ ತಮ್ಮ ಯಜಮಾನಿಕೆಯನ್ನು ಅವರ ಮೇಲೆ ಹೊರಿಸಲು ಸ್ಪೇನಿನವರಿಗೆ ಮತ್ತು ಅಮೆರಿಕನರಿಗೆ ಕಷ್ಟವೇ ಆಯಿತು. 20ನೆಯ ಶತಮಾನದ ಪ್ರಾರಂಭದ ಹೊತ್ತಿಗೆ ಮೋರೋಗಳು ವಿದೇಶಿಯರ ಆಳ್ವಿಕೆಗೆ ಒಳಪಟ್ಟರು. ಫಿಲಿಫಿನೊ-ಮಲೇಷಿಯ ಬುಡಕಟ್ಟಿನ ಆದಿವಾಸಿ ಬಣಗಳಲ್ಲಿ ಕೆಲವನ್ನು ಲೂeóÁನ್ ದ್ವೀಪದ ಉತ್ತರಭಾಗದ ಮಲೆನಾಡಿನಲ್ಲಿ ಕಾಣಬಹುದು.

	ಫಿಲಿಪೀನ್ಸ್‍ನಲ್ಲಿ ಚೀನೀ ಬುಡಕಟ್ಟಿನವರೂ ನೆಲಸಿದ್ದಾರೆ. ಜನಸಂಖ್ಯೆಯಲ್ಲಿ ಇವರದು ಎರಡನೆಯ ಸ್ಥಾನ. ಇಂಡೊನೇಷ್ಯದವರು ಲೂeóÁನ್ ಮತ್ತು ಮಿಂಡ ನಾವೋ ದ್ವೀಪಗಳ ಬೆಟ್ಟಗಾಡುಗಳಲ್ಲಿದ್ದಾರೆ. ಇವರ ಮೂಲಪುರುಷರು ಕ್ರಿಪೂ. 3,000ದ ವೇಳೆಗೆ ಮಲಯದಿಂದ ಫಿಲಿಪೀನ್ಸ್‍ಗೆ ಬಂದವರು. ಇವರೂ ಫಿಲಿಪಿನೋ ಮಲೇಷಿಯ ಬುಡಕಟ್ಟಿನವರು.

	ಈಗಿನ ನೀಗ್ರೋ ಬುಡಕಟ್ಟಿನ ಆದಿವಾಸಿ ಜನರು ಫಿಲಿಪೀನ್ ನೆಗ್ರಿಟೋ ಮೂಲನಿವಾಸಿಗಳ ವಂಶಜರು. ಇವರು ಕ್ರಿ. ಪೂ. 5,000ಕ್ಕೆ ಹಿಂದೆ ಈ ದ್ವೀಪಗಳಿಗೆ ಬಂದರು. ಈ ಜನರು ಗಿಡ್ಡು. ಇವರ ಎತ್ತರ ಸುಮಾರು 1.5 ಮೀ. ಇವರ ಸ್ವರೂಪ ಫಿಲಿಪಿನೋ ಜನರಿಂದ ಭಿನ್ನವಾದ್ದು. ಇವರು ಅರಣ್ಯಗಳಲ್ಲಿ ಹಾಗೂ ಲೂeóÁನ್ ಮೊದಲಾದ ದೊಡ್ಡದ್ವೀಪಗಳ ಕಣಿವೆಗಳಲ್ಲಿ ವಾಸಿಸುತ್ತಾರೆ.

	ಫಿಲಿಪಿನ್ಸ್‍ನಲ್ಲಿ ಅಮೇರಿಕನರೂ ಕೆಲವು ಮಂದಿ ಯೂರೋಪಿಯನರೂ ಇದ್ದಾರೆ. ಫಿಲಿಪಿನೋ ಮತ್ತು ಬಿಳಿಯರ, ಇಲ್ಲವೆ ಫಿಲಿಪಿನೋ ಮತ್ತು ಮಂಗೋಲ್ ಬುಡಕಟ್ಟಿನ ಸಂಮಿಶ್ರ ರಾಜಕೀಯ ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿದ್ದಾರೆ.

	ಜನಜೀವನ: ಗ್ರಾಮಾಂತರಗಳಲ್ಲಿ ಜನರು ತೆಂಗಿನಗರಿ ಮತ್ತು ಬಿದರಿನಿಂದ ನಿರ್ಮಿತವಾದ ಗುಡಿಸಲುಗಳಲ್ಲಿ ವಾಸಿಸುತ್ತಾರೆ. ನೆಲಕ್ಕೂ ಬಿದಿರಿನ ಸಿಬಿರುಗಳನ್ನು ಹಾಕಿರುತ್ತಾರೆ. ಬಿದರಿನ ತಡಿಕೆಗಳಿಂದ ಗೋಡೆಗಳು ರಚಿತವಾಗಿವೆ. ಅನ್ನ ಮತ್ತು ಮೀನು ಜನರ ಮುಖ್ಯ ಆಹಾರ. ನಗರಗಳಲ್ಲಿ ಆಧುನಿಕ ಕಟ್ಟಡÀಗಳಿವೆ. ಇಲ್ಲಿಯ ಜನಜೀವನ ಆಧುನಿಕವಾದದ್ದು. ಫಿಲಿಪೀನ್ಸ್ ಜನರ ಪ್ರಧಾನ ಕಸಬುಗಳು ಬೇಸಾಯ, ಮೀನುಗಾರಿಕೆ, ವ್ಯಾಪಾರ. ಬೇಸಾಯ ಮತ್ತು ಸರಕುಸಾಗಣಿಕೆಗೆ ಎಮ್ಮೆಗಳನ್ನು ಉಪಯೋಗಿಸುತ್ತಾರೆ.

	ಭಾಷೆ: ಫಿಲಿಪೀನ್ಸಿನ ಜನರ ಭಾಷೆ ಮಲಯ(ಪಾಲಿನೇಷ್ಯನ್ ಭಾಷಾಗುಂಪಿಗೆ ಸೇರಿದ್ದು. ಒಟ್ಟು 87 ಭಾಷೆಗಳು ಹಾಗೂ ಉಪಭಾಷೆಗಳಿವೆ. ಜನರ ಮೂರನೆಯ ಒಂದು ಭಾಗದವರು ಟಾಗಾಲೋಗ್ ಭಾಷೆಯನ್ನಾಡುತ್ತಾರೆ. ಫಿಲಿಪೀನ್ಸ್ ಗಣರಾಜ್ಯ 1946 ರಲ್ಲಿ ಅದನ್ನು ರಾಷ್ಟ್ರೀಯ ಭಾಷೆಯಾಗಿ ಅಂಗೀಕರಿಸಿತು. ಸರ್ಕಾರಿ ನೌಕರರು ಹಾಗೂ ವ್ಯಾಪಾರ ವರ್ಗದವರಲ್ಲಿ ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳು ಪ್ರಚಾರದಲ್ಲಿವೆ. ಶಾಲೆಗಳಲ್ಲಿ ಸ್ಪ್ಯಾನಿಷ್, ಇಂಗ್ಲಿಷ್ ಮತ್ತು ಟಾಗಾಲೋಗ್ ಭಾಷೆಗಳಲ್ಲಿ ಶಿಕ್ಷಣ ನೀಡಲಾಗುತ್ತದೆ.

	ಜನಸಂಖ್ಯೆಯ ವಿವರಣೆ: 1970ರಲ್ಲಿ ಫಿಲಿಪೀನ್ಸ್‍ನ ಸರಾಸರಿ ಜನಸಾಂದ್ರತೆ ಚ.ಕಿಮೀ.ಗೆ 134 ಆಗಿತ್ತು. ಆದರೆ ಜನಸಂಖ್ಯೆಯ ವಿತರಣೆ ಒಂದೇ ಸಮನಾಗಿಲ್ಲ. ಚ.ಕಿಮೀ.ಗೆ 16ರಿಂದ 1,548ರವರೆಗೆ. ಪ್ರದೇಶದಿಂದ ಪ್ರದೇಶಕ್ಕೆ ಜನಸಾಂದ್ರತೆ ವ್ಯತ್ಯಾಸವಾಗುತ್ತದೆ.

	ಫಿಲಿಪೀನ್ಸ್‍ನ ಪ್ರಮುಖ ಪಟ್ಟಣಗಳನ್ನೂ ಕಂಸಗಳೊಳಗೆ ಅವುಗಳ ಜನಸಂಖ್ಯೆಗಳನ್ನೂ (1980) ಕೊಟ್ಟಿದೆ: ಮನಿಲ (16,26,249), ಕೇಸಾನ್ ನಗರ (1,165,990), ಡಾವಾ (611,311), ಸೇಬೂ (489,208), ಕ್ಯಾಲವೊಕಾನ್ (471,289), eóÁಂಬವಾಂಗ (344,275), ಈಲವೀಲೊ (1975) (2,22,735), ಪಾಸೈ (1,86,920), ಕಾಗಯಾನ್ ದ ಓರೋ (1,64,782), ಬಾಕೋಲಾಡ್ (2,27,374), ಆಂಘೇಲೇಸ್ (1.49,968), ಓಲಾಂಗ ಪೋ (1,43,279), ಬಟೂವಾನ್ (1,31,336), ಬಸೀಲಾನ್ (1,26,410), ಬಟಾಂಗಾಸ್ (1,25,044), ಕಾಡಿeóï (1,24,563), ಇಲೀಗಾನ್ (1,18,038), ಸ್ಯಾನ್ ಪಾಬ್ಲೋ(1,16,383) ಮತ್ತು ಕಾಬನಟ್ಟಾನ್ (1,13,814).

ಧರ್ಮ: ಫಿಲಿಪೀನ್ಸ್ ಜನರಲ್ಲಿ ಶೇ. 90 ಮಂದಿ ಕ್ರೈಸ್ತರು. 14 ಮತ್ತು 15ನೆಯ ಶತಮಾನಗಳಲ್ಲಿ ಬಂದ ಅರಬ್ ಮುಸ್ಲಿಮರು ಮಿಂಡನಾವೋ ಮತ್ತು ಸೂಲೂ ದ್ವೀಪಸ್ತೋಮದ ಜನರನ್ನು ಇಸ್ಲಾಂ ಮತಕ್ಕೆ ಪರಿವರ್ತಿಸಿದರು. 400 ವರ್ಷಗಳ ಹಿಂದೆ ಸ್ಪೇನಿನ ಪಾದ್ರಿಗಳು ಇಲ್ಲಿ ಅನೇಕರನ್ನು ರೋಮನ್ ಕ್ಯಾತೋಲಿಕ್ ಮತಕ್ಕೆ ಪರಿವರ್ತಿಸಿದರು. ಬಿಷಪ್ ಗ್ರಿಗೊರಿಯೋ ಅಗ್ಲಿಪೆ ಎಂಬ ಫಿಲಿಪಿನ್ಸೊ ಪಾದ್ರಿ ಪೋಪ್ ಧರ್ಮಾಧಿಕಾರವನ್ನು ನಿರಾಕರಿಸಿ ಫಿಲಿಪಿನೋ ಸ್ವತಂತ್ರ ಕ್ರೈಸ್ತ ಧರ್ಮವನ್ನು ಸ್ಥಾಪಿಸಿದ. 1974ರಲ್ಲಿದ್ದಂತೆ ಪ್ರಾಟಸ್ಟೆಂಟ್ ಕ್ರೈಸ್ತರ ಸಂಖ್ಯೆ 30,00,000; ಮುಸಲ್ಮಾನರು 5,00,000; ಬೌಧ್ದರು 43,000. ಸರ್ವಚೇತನ ಪಂಥದವರು 4,00,000.						(ಎ.ಜಿ.ಕೆ.)

ಇತಿಹಾಸ

	ನೀಗ್ರೋ ಬುಡಕಟ್ಟಿನ ಜನರು ಫಿಲಿಪೀನ್ಸಿನ ಮೂಲನಿವಾಸಿಗಳು. ಕ್ರಿ..ಪೂ. ಸುಮಾರು 3000ದ ಹೊತ್ತಿಗೆ ಇಂಡೊನೇಷ್ಯ ಮತ್ತು ಮಲಯ ಜನ ಇಲ್ಲಿಗೆ ವಲಸೆ ಬಂದರು. ಚೀನೀ ಮತ್ತು ಜಪಾನೀ ವ್ಯಾಪಾರಿಗಳು ಈ ದ್ವೀಪಗಳಿಗೆ ಕ್ರಿ..ಪೂ. 700ರ ತರುವಾಯ ಬಂದರು. 14 ಮತ್ತು 15ನೆಯ ಶತಮಾನಗಳಲ್ಲಿ ಅರಬ್ ಮುಸಲ್ಮಾನ ಪ್ರವಾಸಿಗಳು ಮಿಂಡನಾವೋ ಮತ್ತು ಸೂಲೂ ದ್ವೀಪಸ್ತೋಮಗಳಲ್ಲಿ ನೆಲೆಸಿ ಅಲ್ಲಿಯ ಜನರನ್ನು ಇಸ್ಲಾಂ ಮತಕ್ಕೆ ಪರಿವರ್ತಿಸಿದರು. 1521ರಲ್ಲಿ ಪೋರ್ಚುಗೀಸ್ ಭೂಪರಿಶೋಧಕ ಫರ್ಡಿನೆಂಡ್ ಮೆಗಲನ್ನನ ನಾಯಕತ್ವದಲ್ಲಿ ಸ್ವೇನಿನವರು ಈ ದ್ವೀಪಗಳನ್ನು ಮುಟ್ಟಿದರು. ಲೆಗಾಸ್ರ್ಪಿ ಎಂಬಾತನೊಂದಿಗೆ 1565ರಲ್ಲಿ ಬಂದ ಸ್ಪ್ಯಾನಿಷರು ಸೇಬೂ ದ್ವೀಪವನ್ನು ಆಕ್ರಮಿಸಿ ಅಲ್ಲಿಂದ ತಮ್ಮ ಅಧಿಕಾರವನ್ನು ಕ್ರಮ ಕ್ರಮವಾಗಿ ಇತರ ದ್ವೀಪಗಳಿಗೂ ವಿಸ್ತರಿಸಿಕೊಂಡರು. 1571ರಲ್ಲಿ ಅವರಿಂದ ಮನಿಲ ಪಟ್ಟಣ ಸ್ಥಾಪಿತವಾಯಿತು. ಹೀಗೆ ಫಿಲಿಪೀನ್ ದ್ವೀಪಗಳಲ್ಲಿ ವಸಾಹತು ಸ್ಥಾಪಿಸಿದ ಸ್ಪ್ಯಾನಿಷರು ದಕ್ಷಿಣದಲ್ಲಿ ಮೋರೋಸ್ ಮುಸ್ಲಿಮರೊಂದಿಗೂ ಕೆಲವು ಸಲ ಚೀನೀಯರೊಂದಿಗೂ ಹೋರಾಡಬೇಕಾಯಿತು. ಇಲ್ಲಿ ಸ್ಪ್ಯಾನಿಷರ ಆಳ್ವಿಕೆ 1898ರ ವರೆಗೆ ಮುಂದುವರಿಯಿತು. ಅವರ 300 ವರ್ಷಗಳಿಗೂ ಹೆಚ್ಚಿನ ಕಾಲದ ಆಡಳಿತದಲ್ಲಿ ಅನೇಕ ಸಾರಿ ಸ್ಥಳೀಯ ದಂಗೆಗಳಾದುವು. 1762-63ರಲ್ಲಿ ಬ್ರಿಟಿಷರು ಮನಿಲ ಪಟ್ಟಣವನ್ನು ಹಿಡಿದಿದ್ದರು. 19ನೆಯ ಶತಮಾನದಲ್ಲಿ ಕ್ರೈಸ್ತ ಧರ್ಮ ಪ್ರಸಾರ, ವ್ಯಾಪಾರ-ವಾಣಿಜ್ಯಗಳಿಗೆ ಉತ್ತೇಜನ, ಶಾಲೆ ಮತ್ತು ಆಸ್ಪತ್ರೆಗಳ ಸ್ಥಾಪನೆ ಇವುಗಳಿಂದ ಸ್ಪೇನ್ ತನ್ನ ಪ್ರಭುತ್ವವನ್ನು ಬಲಪಡಿಸಿಕೊಂಡಿತು.

	19ನೆಯ ಶತಮಾನದ ಕೊನೆಯ ದಶಕದಲ್ಲಿ ಫಿಲಿಪೀನ್ಸ್‍ನ ಜನರಿಗೂ ಸ್ಪೇನ್ ವಸಾಹತು ಶಾಹಿ ಸರ್ಕಾರಕ್ಕೂ ವೈಷಮ್ಯ ಹೆಚ್ಚಿತು. ಹೋಸೆ ರಿಸಾಲ್ ಮೊದಲಾದವರ ನಾಯಕತ್ವದಲ್ಲಿ ಫಿಲಿಪಿನೋ ಜನ ಸ್ವಾತಂತ್ರ್ಯಕ್ಕಾಗಿ ಚಳವಳಿ ನಡೆಸಿ ವಿಫಲಗೊಂಡರು. 1896-99ರಲ್ಲಿ ರಾಜಕೀಯ ಕ್ರಾಂತಿ ಉಗ್ರರೂಪ ತಾಳಿತು. 1896g ಡಿಸೆಂಬರ್ 30ರಂದು ಫಿಲಿಪೀನ್ಸ್‍ನ ಸ್ಪ್ಯಾನಿಷ್ ಸರ್ಕಾರ ಅಲ್ಲಿಯ ರಾಷ್ಟ್ರವೀರ ರಿಸಾಲನನ್ನು ಗಲ್ಲಿಗೇರಿಸಿದಾಗ ಜನ ಉದ್ರೇಕಗೊಂಡರು. ಕ್ರಾಂತಿನಾಯಕ ಜನರಲ್ ಎಮಿಲಿಯೋ ಅಜಿನಾಲ್ಡೋ ಸ್ಪೇನ್ ದೇಶದ ವಸಾಹತುಶಾಹಿ ಪ್ರಭುತ್ವವನ್ನು ಮುರಿಯುವ ಉದ್ದೇಶದಿಂದ ಫಿಲಿಪೀನ್ ಸರ್ವಾಧಿಕಾರ ಸರ್ಕಾರವನ್ನು ಸ್ಥಾಪಿಸಿ, ಆಡಳಿತವನ್ನು ವಹಿಸಿಕೊಂಡುದಲ್ಲದೆ, ಆಡಳಿತದಲ್ಲಿ ಸುಧಾರಣೆಗಳನ್ನು ತರಲು ಪ್ರಯತ್ನಿಸಿದ. ಈ ಕ್ರಾಂತಿಕಾರಿ ಸರ್ಕಾರದ ಗಣನೀಯ ಸಾಧನೆಯೆಂದರೆ ಪ್ರಜಾಸತ್ತಾತ್ಮಕ ಸಂವಿಧಾನ ಘೋಷಣೆ, ಆದರೆ, ಅದೇ ಸಮಯದಲ್ಲಿ ಫಿಲಿಪೀನ್ ಸ್ವಯಮಾಡಳಿತಕ್ಕೆ ವ್ಯತಿರಿಕ್ತವಾಗಿ ಕೆಲವು ಸನ್ನಿವೇಶUಳು ಉದ್ಭವಿಸಿದುವು. ಸ್ಪೇನ್ ಮತ್ತು ಅಮೆರಿಕಗಳ ನಡುವೆ ನಡೆದ ಯುದ್ಧದಲ್ಲಿ (1896-99) ಸ್ಪೇನ್ ಸೋತು ಹೋಯಿತು. ಅಮೆರಿಕನ್ ನೌಕಾದಳ ಸ್ಪೇನ್ ನೌಕಾದಳವನ್ನು 1893ರ ಮೇ 1ರಂದು ಮನಿಲ ಕೊಲ್ಲಿಯಲ್ಲಿ ಸೋಲಿಸಿತು. ಅಮೆರಿಕನರು ತಮ್ಮ ಸೈನ್ಯವನ್ನು ಮನಿಲದಲ್ಲಿ ನಿಲ್ಲಿಸಿದರು. 1898ರ ಡಿಸೆಂಬರ್ 10ರ ಕೌಲಿನಿಂದ ಅಮೆರಿಕನರಿಗೆ ಫಿಲಿಪೀನ್ ದ್ವೀಪಗಳು ಸೇರಿದುವು.

	ಈ ಘಟನೆಗಳಿಂದ ಫಿಲಿಪೀನ್ಸ್ ಜನ ಎದೆಗುಂದಲಿಲ್ಲ. ಅವರಿಗೂ ಅಮೆರಿಕ ಸರ್ಕಾರಕ್ಕೂ ನಡುವೆ 1899ರಿಂದ 1901ರವರೆಗೆ ಘರ್ಷಣೆಗಳು ಆಗುತ್ತಲೇ ಇದ್ದುವು. ಅಮೆರಿಕನರು ಅವ್ಯವಸ್ಥಿತ ಆರ್ಥಿಕ ಪರಿಸ್ಥಿತಿಯನ್ನು ತಹಬಂದಿಗೆ. ತಂದು ಎಲ್ಲ ದ್ವೀಪಗಳಲ್ಲೂ ವ್ಯಾಪಕ ಶಿಕ್ಷಣಪದ್ಧತಿಯನ್ನು ರೂಢಿಗೆ ತಂದರು. 1901-03ರ ನಡುವೆ ನಾಗರಿಕ ಸರ್ಕಾರ ಸ್ಥಾಪಿತವಾಗಿ ಫಿಲಿಪೀನ್ಸ್ ಜನರು ಆಡಳಿತದಲ್ಲಿ ಭಾಗವಹಿಸಲು ಅವಕಾಶವಾಯಿತು. ಇಂಗ್ಲಿಷ್ ಆಡಳಿತದ ಹಾಗೂ ಶಿಕ್ಷಣದ ಭಾಷೆಯಾಯಿತು. ಪ್ರಜಾತಂತ್ರಾತ್ಮಕ ನ್ಯಾಯಾಂಗ ಮತ್ತು ಆಡಳಿತಾಂಗ ಸ್ಥಾಪಿತವಾದುವು. 1934ರಲ್ಲಿ ಅಮೆರಿಕನರು ಫಿಲಿಪೀನ್ಸ್ ಜನರಿಗೆ ಸ್ವಾತಂತ್ರ್ಯ ನೀಡುವುದಾಗಿ ಭರವಸೆ ಇತ್ತರು. 1935ರ ನವೆಂಬರ್ 15ರಂದು ಫಿಲಿಪೀನ್ಸ್ ದ್ವೀಪಗಳ ಕಾಮನ್‍ವೆಲ್ತ್ ಸ್ಥಾಪಿತವಾಯಿತು.

	ಎರಡನೆಯ ಮಹಾಯುದ್ಧದ ಪೆಸಿಫಿಕ್ ಸಾಗರ ಸಮರದಲ್ಲಿ (1941-45) ಜಪಾನೀಯರು ಫಿಲಿಪೀನ್ಸನ್ನು ಆಕ್ರಮಿಸಿ (1941)ಮೂರು ವರ್ಷಗಳಕಾಲ ಅದನ್ನು ತಮ್ಮ ಸ್ವಾಧೀನದಲ್ಲಿರಿಸಿಕೊಂಡರು. ಆದರೆ ಏಪ್ರಿಲ್ 1945ರಲ್ಲಿ ಜಪಾನೀಯರು ಸಂಪೂರ್ಣವಾಗಿ ಸೋತರು. ಫಿಲಿಪೀನ್ಸ್ ಮತ್ತೆ ಅಮೆರಿಕನರ ವಶವಾಯಿತು. ಅಮೆರಿಕನರು ಫಿಲಿಪೀನ್ಸ್ ಜನರಿಗೆ ಪೂರ್ಣ ಸ್ವಾತಂತ್ರ್ಯವನ್ನು 1946ರ ಜುಲೈ 4ರಂದು ನೀಡಿದರು. ಫಿಲಪೀನ್ಸ್ ಗಣರಾಜ್ಯ 1947ರಲ್ಲಿ ಅಮೆರಿಕನರಿಗೆ ಕೆಲವು ಸೈನಿಕ ರಿಯಾಯಿತಿಗಳನ್ನು 99 ವರ್ಷಗಳ ಅವಧಿಯ ಗೇಣಿಗೆ ಕೊಟ್ಟಿದೆ. ಈ ಒಪ್ಪಂದಕ್ಕೆ 1959ರಲ್ಲಿ ತಿದ್ದುಪಾಟಾಯಿತು.

	1946ರಿಂದ 1973ರ ಜನವರಿ 17ರ ವರೆಗೆ ಫಿಲಿಪೀನ್ಸ್ ಗಣರಾಜ್ಯದಲ್ಲಿ 1935ರ ಸಂವಿಧಾನ ಜಾರಿಯಲ್ಲಿತ್ತು. 1965ರಲ್ಲಿ ಫರ್ಡಿನೆಂಡ್ ಮಾರ್ಕೋಸ್ ರಾಷ್ಟ್ರಾಧ್ಯಕ್ಷರಾದರು. ಮತ್ತೆ 1969ರ ನವೆಂಬರ್‍ನಲ್ಲಿ ಅವರು ಚುನಾಯಿತರಾದರು. ಪ್ರಜಾಸತ್ತಾತ್ಮಕ ಗಣರಾಜ್ಯಕ್ಕೆ ಅಪಾಯ ತರುವ ಸನ್ನಿವೇಶಗಳಿವೆಯೆಂದು ಅವರು 1972ರ ಸೆಪ್ಟೆಂಬರ್ 21ರಂದು ಸೈನ್ಯಾಡಳಿತವನ್ನು ಜಾರಿಗೆ ತಂದರು. 1973ರ ಜನವರಿ 17ರಂದು ಹೊಸ ಸಂವಿಧಾನವನ್ನು ಘೋಷಿಸಿದರು. ಈ ಸಂವಿಧಾನದ ಪ್ರಕಾರ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳಿಗೆ ಅವಕಾಶವಾಯಿತು. ಅದೇ ವರ್ಷ ಜನಮತಗಣನೆಯಲ್ಲಿ, ಪ್ರಜೆಗಳು ಮಧ್ಯವರ್ತಿ ರಾಷ್ಟ್ರೀಯ ಸಭೆ ಸೇರುವುದನ್ನು ಮುಂದಕ್ಕೆ ಹಾಕಿ ಮಾರ್ಕೋಸ್ ಅಧ್ಯಕ್ಷನಾಗಿ ಮುಂದುವರಿದು ಸುಧಾರಣೆಗಳನ್ನು ತರಬೇಕೆಂಬುದನ್ನು ಅನುಮೋದಿಸಿದರು. 1975ರ ಫೆಬ್ರವರಿ 27-28ರಲ್ಲೂ ಫಿಲಿಪೀನ್ಸ್ ಜನ ಸೈನ್ಯಾಡಳಿತ ಮುಂದುವರಿಯುವ ಬಗ್ಗೆ ಮತದಾನ ನೀಡಿ, ರಾಷ್ಟ್ರಾಧ್ಯಕ್ಷರಿಗೆ ಸ್ಥಳೀಯ ಅಧಿಕಾರಿಗಳನ್ನು ನೇಮಿಸಲೂ ಮುಕ್ತ ಅಧಿಕಾರ ವಹಿಸಿದರು. ಪ್ರಾಂತ್ಯಗಳ ಸ್ಥಳೀಯ ಸರ್ಕಾರ ವ್ಯವಸ್ಥೆಯನ್ನು ಸುಧಾರಿಸಲು ಅಧ್ಯಕ್ಷ ಮಾರ್ಕೋಸ್ ಕ್ರಮ ಕೈಗೊಂಡರು.

	ಪುರಾತತ್ವ: ಫಿಲಿಪೀನ್ಸ್ ದ್ವೀಪಗಳು ಸುಮಾರು 1800 ವರ್ಷಗಳ ಹಿಂದೆಯೇ ಬಾಲಿ, ಜಾವಾ ದ್ವೀಪಗಳ ಮೂಲಕ ಭಾರತೀಯ ಸಂಸ್ಕ್ರತಿಯ ಪ್ರಭಾವಕ್ಕೊಳಗಾಗಿದ್ದುವು. ಚೀನದ ವ್ಯಾಪಾರಿಗಳೂ ಪುರಾತನ ಕಾಲದಿಂದಲೂ ಈ ದ್ವೀಪಗಳೊಡನೆ ವ್ಯಾಪಾರ ನಡೆಸುತ್ತಿದ್ದರು. ಆ ದೇಶದ ಮೃತ್‍ಪಾತ್ರೆಗಳ ಅವಶೇಷಗಳು ಈ ದ್ವೀಪದಲ್ಲಿ ಸಿಕ್ಕಿವೆ. ಇದು ಜಾವಾದಲ್ಲಿ ಕ್ರಿ..ಶ.ಸುಮಾರು 1264ರಿಂದ 1447ರ ವರೆಗೆ ಇದ್ದ ಮಜಪಹಿತ್ ರಾಜ್ಯದ ಒಂದು ಭಾಗವಾಗಿತ್ತು. ಎಚ್. ಓಟ್ಲೆ ಬೇಯರ್ ಇಲ್ಲಿ ನಡೆಸಿದ ಸಣ್ಣಪುಟ್ಟ ಉತ್ಖನನಗಳಿಂದ ಇಲ್ಲಿ ಇತಿಹಾಸಪೂರ್ವದ ಹಳೆಯ ಶಿಲಾಯುಗದಿಂದ ಹಲವು ಸಂಸ್ಕøತಿಗಳ ಅವಶೇಷಗಳು ಬೆಳಕಿಗೆ ಬಂದಿವೆ. ಲೂeóÁನಿನಲ್ಲಿ ಹಳೆಯ ಶಿಲಾಯುಗದ ಅನಂತರದ ಕಾಲದ ಸೂಕ್ಷ್ಮ ಶಿಲಾಯುಗ ಸಂಸ್ಕøತಿಯ ಕಲ್ಲಿನ ವಿವಿಧ ಉಪಕರಣಗಳು ದೊರೆತಿವೆ. ಉತ್ತರ ವಿಯೆಟ್ನಾಮಿನ ಟಾನ್‍ಕಿನ್‍ನಲ್ಲಿರುವ ಹೋಯಬಿನ್ಹ್ ನಲ್ಲಿಯ ಇದೇ ಸಂಸ್ಕøತಿಯ ಉಪಕರಣಗಳನ್ನು ಇವು ನಿಕಟವಾಗಿ ಹೋಲುತ್ತವೆ. ನೂತನ ಶಿಲಾಯುಗದ ವರ್ತುಲಾಕಾರದ ಇಲ್ಲವೆ ದ್ವಿಭುಜೀಯ ಕೊಡಲಿಗಳು, ಮದ್ಯದಲ್ಲಿ ಉಬ್ಬಿದ ರೇಖೆಗಳುಳ್ಳ ಕೊಡಲಿಗಳು ದೊರೆತಿವೆ. ಉಜ್ಜಿ ನಯಗೊಳಿಸಿದ ಚತುರ್ಭುಜೀಯ ಕೊಡಲಿಯ ಉಪಯೋಗ ಬಹುಶಃ ದಕ್ಷಿಣ ಪ್ರದೇಶದ ಸಂಸ್ಕøತಿಯ ಸಂಪರ್ಕದಿಂದಲೂ ಅಲಂಕಾರಕ್ಕಾಗಿ ಕಪ್ಪು ಹಸುರಿನ ಕಲ್ಲಿನ ಬಳಕೆ ಉತ್ತರದ ಇಂಡೋಚೀನದಿಂದಲೂ ಬಂದವು. ನೂತನ ಶಿಲಾಯುಗ ಸಂಸ್ಕøತಿಯು ಕೊನೆಯ ಹಂತದ ಹೊತ್ತಿಗಾಗಲೇ ಕಬ್ಬಿಣ ಯುಗ ಸಂಸ್ಕøತಿ ಊರ್ಜಿತವಾಗಿತ್ತು.

	ಚೀನದ ಟ್ಯಾಂಗ್ ವಂಶದ ಆಳ್ವಿಕೆಯ ಪೂರ್ವದಲ್ಲೆ ಅಲ್ಲಿಯ ಜನರು ಫಿಲಿಪೀನ್ಸಿ ನೊಂದಿಗೆ ವ್ಯಾಪಾರ ನಿರತರಾಗಿದ್ದರು. ಟ್ಯಾಂಗ್ ಮತ್ತು ಸೂಂಗ್ ವಂಶಗಳು, ಹೆಚ್ಚಾಗಿ ಯುವಾನ್ ವಂಶದ ಕೊನೆಯ ಹಂತದ ಮತ್ತು ಮಿಂಗ್ ವಂಶದ ಕಾಲಗಳಲ್ಲಿ ಥೈ ಹಾಗೂ ಇಂಡೊ-ಚೀನ ಪ್ರದೇಶದಿಂದ ವ್ಯಾಪಾರದ ಮೂಲಕ ಬಂದ ಮೃತ್‍ಪಾತ್ರೆಗಳ ಅವಶೇಷಗಳು ದೊರೆತಿವೆ. ಒಟ್ಡಿನಲ್ಲಿ ಸುತ್ತೆಲ್ಲ ಇರುವ ದ್ವೀಪಗಳೊಡನೆ, ಭೂಭಾಗಗಳೊಡನೆ ಫಿಲಿಪೀನ್ಸ್ ವ್ಯಾಪಾರ ಸಂಪರ್ಕ ಹೊಂದಿದ್ದುದು ಈ ಅವಶೇಷಗಳಿಂದ ಗೊತ್ತಾಗಿದೆ.
	ಉತ್ತರ ಲೂeóÁನ್ ಪ್ರದೇಶದ ಬತ್ತದ ಗದ್ದೆಗಳಿಗೆ ಇಲ್ಲಿಯ ಗೋಡೆಗಳಿಂದ ಕಾಲುವೆಗಳನ್ನು ನಿರ್ಮಿಸಿ ನೀರನ್ನು ಹಾಯಿಸುವ ಪ್ರಾಚೀನ ಕ್ರಮ ಸ್ವಾರಸ್ಯಕರವಾಗಿದೆ. ಇವು ಹಲವಾರು ಕಿಮೀಗಳಷ್ಟು ಉದ್ದವಾಗಿವೆ. ಮನುಷ್ಯರ ತಲೆಯನ್ನು ಬೇಟೆಯಾಡುತ್ತಿದ್ದ ಬೃಹತ್ ಶಿಲಾ ಸಂಸ್ಕøತಿಯ ಜನರೇ ಇವುಗಳಿಗೆ ಕಾರಣರೆಂದು ತಿಳಿಯಲಾಗಿದೆ. ಇದಕ್ಕೂ ಪೂರ್ವದಿಂದ ಇದ್ದ ನೆಗ್ರಿಟೊ ಜನಾಂಗದವರು ಇನ್ನೂ ಅಲೆಮಾರಿತನದಲ್ಲೇ ಇದ್ದು ಆಹಾರ ಸಂಗ್ರಹ ಸ್ಥಿತಿಯಲ್ಲೆ ಇದ್ದಾರೆ.

	ಫಿಲಿಪೀನ್ಸ್ ಏಷ್ಯ ಮತ್ತು ಪೆಸಿಫಿಕ್ ಪ್ರದೇಶದ ಮಧ್ಯ ಭಾಗದಲ್ಲಿರುವುದರಿಂದ ಪ್ರಾಚೀನ ಕಾಲದಿಂದಲೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಇದು ಆಶ್ರಯ ನೀಡಿತ್ತು. ಆದ್ದರಿಂದ ಇಲ್ಲಿ ಹೆಚ್ಚಿನ ಸಂಶೋಧನೆ ನಡೆಸಿದಲ್ಲಿ ಕುತೂಹಲಕರವಾದ ಜನಜೀವನ ಸಂಗತಿಗಳು ಹೊರಬೀಳುವುವೆಂದು ನಿರೀಕ್ಷಿಸಬಹುದು.	(ಎ.ಎಸ್.ಯು.)

ಸಂವಿಧಾನ ಮತ್ತು ಆಡಳಿತ

	ಸಂವಿಧಾನ: 1973ರ ಜನವರಿ 17ರಂದು ಘೋಷಿತವಾದ ಸಂವಿಧಾನದ ಪ್ರಕಾರ ರಾಷ್ಟ್ರೀಯ ಸಭೆಯ (ನ್ಯಾಷನಲ್ ಅಸೆಂಬ್ಲಿ) ಸದಸ್ಯರು ತಮ್ಮಲ್ಲೇ ಒಬ್ಬನನ್ನು ಬಹುಮತದಿಂದ ರಾಷ್ಟ್ರಾಧ್ಯಕ್ಷನಾಗಿ 6 ವರ್ಷಗಳ ಅವಧಿಗೆ ಆಯ್ಕೆ ಮಾಡುತ್ತಾರೆ. ರಾಷ್ಟ್ರಾಧ್ಯಕ್ಷ ಯಾವ ರಾಜಕೀಯ ಪಕ್ಷಕ್ಕೂ ಸೇರದವನು; ಅಧಿಕಾರಾವಧಿಯಲ್ಲಿ ಅವನು ರಾಷ್ಟ್ರೀಯ ಸಭೆಯ ಸದಸ್ಯನಾಗಿರುವುದಿಲ್ಲ. ರಾಷ್ಟ್ರಾಧÀ್ಯಕ್ಷನಾಗಲು ಕನಿಷ್ಟ ವಯಸ್ಸು 50. ರಾಷ್ಟ್ರೀಯ ಸಭೆಯನ್ನು ರದ್ದು ಮಾಡಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವ ಹಾಗು ಸಚಿವ ಸಂಪುಟದ ರಾಜೀನಾಮೆಯನ್ನು ಅಂಗೀಕರಿಸುವ ಅಧಿಕಾರಗಳು ಅವನಿಗಿದ್ದುವು. 1973ರ ಸಂವಿಧಾನ 1974ರಲ್ಲಿ ರದ್ದಾಯಿತು. 1975ರ ಫೆಬ್ರವರಿಯಲ್ಲಿ ನಡೆಸಿದ ಜನಮತಗಣನೆಯಲ್ಲಿ ಸೈನ್ಯಾಡಳಿತದ ಮುಂದುವರಿಕೆಗೆ ಬಹುಮತ ದೊರಕಿತು. ರಾಷ್ಟ್ರಾಧ್ಯಕ್ಷನಿಗೆ ಸ್ಥಳೀಯ ಹೊಸ ಅಧಿಕಾರಿಗಳನ್ನು ನೇಮಿಸುವ ವಿಶೇಷ ಅಧಿಕಾರ ಪ್ರಾಪ್ತವಾಯಿತು.
	ಆಡಳಿತಾಧಿಕಾರ ಪ್ರಧಾನ ಮಂತ್ರಿಯಲ್ಲಿ ನಿಹಿತವಾಗಿದ. ಅವನಿಗೆ ಸಹಾಯವಾಗಿ ಸಚಿವ ಸಂಪುಟವಿರುತ್ತದೆ. ರಾಷ್ಟ್ರೀಯ ಸಭೆಯ ಸದಸ್ಯರ ಬಹುಮತದಿಂದ ಪ್ರಧಾನ ಮಂತ್ರಿಯ ನೇಮಕವಾಗುತ್ತದೆ. ಪ್ರಧಾನ ಮಂತ್ರಿ ಸಚಿವ ಸಂಪುಟದ ಸದಸ್ಯರನ್ನು ಆಯ್ಕೆ ಮಾಡುತ್ತಾನೆ. ಹೊಸ ಸಂವಿಧಾನದ ಪ್ರಕಾರ ರಾಷ್ಟ್ರಾಧ್ಯಕ್ಷ ಪ್ರಧಾನ ಮಂತ್ರಿಯ ಅಧಿಕಾರಗಳನ್ನು ಹೊಂದಿದ್ದಾನೆ. ರಾಷ್ಟ್ರೀಯ ಸಭೆಗೆ ಪ್ರತಿಯಾಗಿ ಗ್ರಾಮಾಂತರ ಹಾಗೂ ಪೌರ ಪ್ರದೇಶಗಳಲ್ಲಿ ನಾಗರಿಕರ ಸಭೆಗಳು ಏರ್ಪಟ್ಟಿವೆ, ಈ ಸಭೆಗಳು ಸೈನಿಕ ಆಡಳಿತದ ಮುಂದುವರಿಕೆಯನ್ನು ಅನುಮೋದಿಸಬಹುದು.

	ರಾಷ್ಟ್ರೀಯ ಸಭೆಯ ಸದಸ್ಯರು ಸಾರ್ವತ್ರಿಕ ಚುನಾವಣೆಗಳ ಮೂಲಕ ಆಯ್ಕೆ ಹೊಂದುತ್ತಾರೆ. ಚುನಾವಣೆಗೆ ನಿಲ್ಲುವ ಉಮೇದುವಾರರ ವಯಸ್ಸು ಕನಿಷ್ಟ 25 ಆಗಿರಬೇಕು. ಸಭೆಯ ಸದಸ್ಯರು ತಮ್ಮಲ್ಲಿ ಒಬ್ಬನನ್ನು ಸಭೆಯ ಅಧ್ಯಕ್ಷನನ್ನಾಗಿ ಆಯ್ಕೆ ಮಾಡುತ್ತಾರೆ. ಪ್ರತಿ ವರ್ಷ ಜುಲೈ 4ನೆಯ ಸೋಮವಾರ ಸಭೆಯ ಅಧಿವೇಶನ ಪ್ರಾರಂಭವಾಗಿ 30 ದಿನಗಳು ಕಾಲ ಕಲಾಪ ನಡೆಸುತ್ತದೆ. 1973ರಲ್ಲಿ ಸೈನ್ಯಾಡಳಿತ ಘೋಷಿತವಾದಾಗ ರಾಷ್ಟ್ರೀಯ ಸಭೆ ರದ್ದಾಯಿತು.

	ನ್ಯಾಯಾಡಳಿತ: ಸರ್ವೋನ್ನತ ನ್ಯಾಯಾಲಯದಲ್ಲಿ ಒಬ್ಬ ಮುಖ್ಯ ನ್ಯಾಯಾಧೀಶ ಮತ್ತು 14 ಮಂದಿ ಸಹ ನ್ಯಾಯಾಧೀಶರ ಇರುತ್ತಾರೆ. ಇವರು ಒಟ್ಟಾಗಿ ಇಲ್ಲವೆ ಎರಡು ವಿಭಾಗಗಳಲ್ಲಿ ಕುಳಿತು ವಿಚಾರಣೆ ನಡೆಸಬಹುದು. ರೂಢಿಂiÀiಲ್ಲಿ ಇರುವ ಕಾನೂನು ಅಥವಾ ಕರಾರು ಸಂವಿಧಾನಕ್ಕೆ ವಿರುದ್ಧವಾಗಿದೆಯೆಂದು ಘೋಷಿಸಲು ಹಾಗೂ ಮರಣ ದಂಡನೆಯನ್ನು ವಿಧಿಸಲು ಕನಿಷ್ಠ 10 ನ್ಯಾಯಾಧೀಶರ ಒಪ್ಪಿಗೆ ಅಗತ್ಯ. ಇತರ ವಿಷಯಗಳ ಬಗ್ಗೆ 8 ನ್ಯಾಯಾಧೀಶರ ತೀರ್ಮಾನ ಸಾಕು. ಅಪೀಲು ನ್ಯಾಯಾಲಯದಲ್ಲಿ ಅಧ್ಯಕ್ಷತೆ ವಹಿಸುವ ಒಬ್ಬ ನ್ಯಾಯಾಧೀಶ ಮತ್ತು 35 ಸಹ ನ್ಯಾಯಾಧೀಶರಿರುತ್ತಾರೆ. ಸರ್ವೋನ್ನತ ನ್ಯಾಯಾಲಯ ಮತ್ತು ಅಪೀಲು ನ್ಯಾಯಾಲಯ ಅಲ್ಲದೆ ಜಿಲ್ಲಾ ನ್ಯಾಯಾಲಯಗಳು, ಸಂಚಾರಿ ಕ್ರಿಮಿನಲ್ ನ್ಯಾಯಾಲಯಗಳೂ, ಬಾಲಾಪರಾಧ ವಿಚಾರಣೆಯ ನ್ಯಾಯಾಲಯಗಳು ಹಾಗೂ ಪೌರಸಭಾ ನ್ಯಾಯಾಲಯಗಳು ಇವೆ.

	ಸ್ಥಳೀಯ ಸರ್ಕಾರ: ಆಡಳಿತಕ್ಕಾಗಿ ರಾಜ್ಯವನ್ನು ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ. ಪ್ರತಿ ಪ್ರಾಂತ್ಯದಲ್ಲೂ ನಗರಗಳ ಆಡಳಿತಕ್ಕೆ ಪೌರಸಭೆಗಳಿವೆ. ಪ್ರಾಂತ್ಯದ ಗವರ್ನರ್ ಮತ್ತು ಇಬ್ಬರು ಸದಸ್ಯರನ್ನೊಳಗೊಂಡ ಪ್ರಾಂತ್ಯ ಮಂಡಲಿ ಪ್ರಾಂತ್ಯದ ಆಡಳಿತವನ್ನು ನಿರ್ವಹಿಸುತ್ತದೆ. ಚುನಾವಣೆಗಳಿಂದ ಇವರ ನೇಮಕವಾಗುತ್ತದೆ. ಪೌರಸಭೆಯ ಆಡಳಿತಕ್ಕೆ ಆಯ್ಕೆಯಾದ ಒಬ್ಬ ಮೇಯರ್, ಒಬ್ಬ ಉಪಮೇಯರ್ ಮತ್ತು ಸದಸ್ಯರು ಇರುತ್ತಾರೆ.

	ಶಿಕ್ಷಣ: ಅಮೆರಿಕನರು ಫಿಲಿಪೀನ್ಸನ್ನು ಆಕ್ರಮಿಸಿಕೊಂಡಾಗ ಪ್ರಾಥಮಿಕ ಶಿಕ್ಷಣ ಉಚಿತ. 1973ರಲ್ಲಿ 43,639 ಪ್ರಾಥಮಿಕ ಶಾಲೆಗಳು, 3,666 ಸೆಕೆಂಡರಿ ಶಾಲೆಗಳು ಇದ್ದುವು. ಅವುಗಳ ವಿದ್ಯಾರ್ಥಿಗಳ ಸಂಖ್ಯೆ 191 0,625. ಒಟ್ಟು 558 ಕಾಲೇಜುಗಳಲ್ಲಿ 8,10,530 ವಿದ್ಯಾರ್ಥಿಗಳು ಇದ್ದರು. ಫಿಲಿಪೀನ್ಸಿನ ವಿಶ್ವವಿದ್ಯಾಲಯಗಳ ಸಂಖ್ಯೆ 42.

ಆರ್ಥಿಕತೆ

	ವ್ಯವಸಾಯ: ಪರ್ವತಗಳ ತಪ್ಪಲುಗಳು ಬೇಸಾಯಕ್ಕೆ ಯೋಗ್ಯವಾಗಿವೆ. ಮುಖ್ಯ ಬೆಳೆಗಳು ಬತ್ತ, ಮುಸುಕಿನ ಜೋಳ, ತೆಂಗು, ಕಬ್ಬು, ಸೆಣಬು, ಗೆಣಸು, ಬಾಳೆ, ಮಾವು ಮತ್ತು ನಿಂಬೆ ಜಾತಿಯ ಹಣ್ಣುಗಳು. ತೆಂಗಿನ ಬೆಳೆಯಲ್ಲಿ ಫಿಲಿಪೀನ್ಸ್‍ಗೆ ಪ್ರಧಾನ ಸ್ಧಾನವಿದೆ. ರಾಷ್ಟ್ರೀಯ ವ್ಯವಸಾಯ ಯೋಜನೆಯಲ್ಲಿ ಭತ್ತವನ್ನು ಹೆಚ್ಚಾಗಿ ಬೆಳೆಯಲು ಪ್ರಾಮುಖ್ಯ ನೀಡಲಾಗಿದೆ.

	ಮೀನುಗಾರಿಕೆ: ಮೀನುಗಾರಿಕೆಗೆ ವ್ಯವಸಾಯದಷ್ಟೇ ಪ್ರಾಮುಖ್ಯವಿದೆ. ಸಮುದ್ರ, ಸರೋವರ ಮತ್ತು ನದಿಗಳಲ್ಲಿ ಮತ್ಸ್ಯಸಂಪತ್ತು ಅಧಿಕವಾಗಿದೆ. ಜನರ ಪ್ರಧಾನ ಆಹಾರ ಅನ್ನ ಮತ್ತು ಮೀನು

	ಅರಣ್ಯಗಾರಿಕೆ: ಫಿಲಿಪೀನ್ಸ್‍ನ ಒಟ್ಟು ವಿಸ್ತೀರ್ಣದಲ್ಲಿ 47% ರಷ್ಟು ಅರಣ್ಯ ಪ್ರದೇಶ. ಮರದ ಸಾಮಾನುಗಳ ತಯಾರಿಕೆಗೆ ಬೇಕಾಗುವ ಉತ್ತಮ ಜಾತಿಯ ವೃಕ್ಷಗಳು ಕಾಡುಗಳಲ್ಲಿ ಅಧಿಕವಾಗಿವೆ. ಬಣ್ಣ ತಯಾರಿಕೆಗೆ ಉಪಯುಕ್ತವಾಗುವ ತೊಗಟೆಮರಗಳು, ಬೆತ್ತ ಹಾಗೂ ಬಿದಿರುಮಳೆಗಳೂ ಹೆಚ್ಚಾಗಿವೆ.

	ಖನಿಜ ಸಂಪತ್ತು: ಫಿಲಿಪೀನ್ಸಿನ ಖನಿಜಸಂಪತ್ತು ಗಣನೀಯ. ಪ್ರಮುಖ ಖನಿಜಗಳು ತಾಮ್ರ, ಕಬ್ಬಿಣದ ಅದರು, ಚಿನ್ನ, ಮ್ಯಾಂಗನೀಸ್, ಕ್ರೋಮೈಟ್, ಸುಣ್ಣ ಮತ್ತು ಕಟ್ಟಡಕಲ್ಲು. ಕೆಲವು ದ್ವೀಪಗಳಲ್ಲಿ ಕಲ್ಲಿದ್ದಲು ಗಣಿಗಳಿವೆ. ಸೇಬೂ, ಲೇಟೀ ಮತ್ತು ಲೂeóÁನ್ ದ್ವೀಪಗಳಲ್ಲಿ ತೈಲ ದೊರಕುತ್ತದೆ. ಲೂeóÁನ್, ಮಿಂಡನಾವೋ ಮತ್ತು ಮಾಸ್ಬಾಟೀ ದ್ವೀಪಗಳಲ್ಲಿ ಚಿನ್ನವನ್ನು ಉತ್ಪಾದಿಸಲಾಗುತ್ತದೆ. ರಾಜ್ಯದಲ್ಲಿ ತಾಮ್ರದ ನಿಕ್ಷೇಪಗಳೂ ಇವೆ.

	ಕೈಗಾರಿಕೆ, ವಾಣಿಜ್ಯ: ಮೀನು, ಹಣ್ಣು ಮತ್ತು ಆಹಾರ ವಸ್ತುಗಳ ಡಬ್ಬೀಕರಣ, ಪೆಟ್ರೋಲ್ ಶುದ್ಧೀಕರಣ, ಜವಳಿ, ಕಾಗದ, ರಬ್ಬರ್, ಸರಕು, ಔಷದ ಹಾಗೂ ರಾಸಾಯನಿಕ ವಸ್ತುಗಳ ತಯಾರಿಕೆ ಇವು ಪ್ರಮುಖ ಕ್ಯೆಗಾರಿಕೆಗಳು. ಫಿಲಿಪೀನ್ಸ್‍ನಿಂದ ಕೊಬ್ಬರಿ, ಕೊಬ್ಬರಿ ಎಣ್ಣೆ, ಸಕ್ಕರೆ ಹೆಚ್ಚಾಗಿ ರಫ್ತಾಗುತ್ತವೆ.

	ನಾಣ್ಯ: ಫಿಲಿಪೀನ್ಸ್‍ನ ನಾಣ್ಯ ಫಿಲಿಪೀನ್ ಪೇಸೋ. ಇದನ್ನು 100 ಸೆಂಟಾವೋಗಳಾಗಿ ವಿಭಾಗಿಸಲಾಗಿದೆ.
ಸಾರಿಗೆ ಸಂಪರ್ಕ

	ಭೂ ಸಾರಿಗೆ: ಎರಡನೆಯ ಮಹಾಯುದ್ಧ ಕಾಲದಲ್ಲಿ ಜಪಾನೀ ದಾಳಿಗಳಿಂದ ರೈಲು ಮಾರ್ಗಗಳಿಗೆ ಭಾರಿ ನಷ್ಟವಾಯಿತು. ಯುದ್ಧಾನಂತರ ರೈಲ್ವೆಯನ್ನು ಪುನವ್ರ್ಯವಸ್ಥೆಗೊಳಿಸಲಾಯಿತು  ರೈಲು ಮಾರ್ಗಗಳು ಪ್ರಧಾನವಾಗಿ ಲೂeóÁನ್ ದ್ವೀಪದಲ್ಲಿವೆ. ಪನೈ ದ್ವೀಪದಲ್ಲಿ ಕೆಲವು ಕಿಮೀ. ರೈಲುಮಾರ್ಗಗಳಿವೆ. 1971ರಲ್ಲಿ 1,067 ಕಿಮೀ. ಉದ್ದದ ರೈಲುಮಾರ್ಗಗಳಿದ್ದುವು. ಮನಿಲದಿಂದ ಸ್ಯಾನ್ ಫರ್ನಾಂಡೋ, ಲಾಯೂನಿಯನ್ ಲೆಗಾಸ್ಪೀ ಮತ್ತು ಆಲ್‍ಟೈಗೆ ರೈಲುಮಾರ್ಗಗಳಿವೆ.

	1974ರಲ್ಲಿ 92,775 ಕಿಮೀ ರಸ್ತೆಗಳಿದ್ದುವು ಫಿಲಿಪೀನ್ಸಿನಲ್ಲಿ ಬಸ್ಸು ಹೆಚ್ಚು ಸಂಚರಿಸುತ್ತವೆ.

	ವಾಯುಸಾರಿಗೆ: ಒಳನಾಡಿನಲ್ಲೂ ಹೊರದೇಶಗಳಿಗೂ ವಿಮಾನ ವ್ಯವಸ್ಥೆಯನ್ನು ಮನಿಲ, ಸೇಬೂ ದ್ವೀಪದ ಮ್ಯಾಕ್‍ಟನ್ ವiತ್ತು ಜಾಂಬವಾಂಗಗಳಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಇತರ ದೊಡ್ಡ 31 ವಿಮಾನ ನಿಲ್ದಾಣಗಳು ಇವೆ. ಒಳನಾಡಿನ ವಿಮಾನ ನಿಲ್ದಾಣಗಳು 90. ಮನಿಲದಿಂದ ಅಮೆರಿಕ, ಯೂರೊಪ್, ಏಷ್ಯ, ಆಸ್ಟ್ರೇಲಿಯ ಖಂಡಗಳಿಗೆ ನೇರ ವಿಮಾನ ಸಂಚಾರವಿದೆ.

	ಸಾಗರ ಸಾರಿಗೆ: ಫಿಲಿಪೀನ್ ದ್ವೀಪಗಳ ನಡುವೆ ಹಡಗುಗಳ ಸಂಚಾರ ಹೆಚ್ಚಾಗಿದೆ. ಪ್ರಯಾಣಿಕರ ಹಾಗೂ ಸರಕುಗಳ ಸಾಗಾಟದಲ್ಲಿ ನೌಕೆಗಳ ಪಾತ್ರ ಗಣನೀಯವಾದ್ದು. ಫಿಲಿಪೀನ್ಸ್‍ನಲ್ಲಿ 97 ರಾಷ್ಟ್ರೀಯ ಹಾಗೂ 502 ಪೌರ ಬಂದರುಗಳಿವೆ. ಅಮೆರಿಕ, ಹಾಂಗ್ಕಾಂಗ್, ಜಪಾನ್ ಮತ್ತು ಪ್ರಪಂಚದ ಇತರ ಕಡೆಗಳಿಗೆ ಇಲ್ಲಿಯ ಪ್ರಮುಖ ಬಂದರುಗಳಿಂದ ಹಡಗುಗಳು ಹೋಗಿಬರುತ್ತವೆ.

	ಪತ್ರಿಕೆಗಳು: ಮನಿಲ ಕ್ರಾನಿಕಲ್ (1945) ಮನಿಲ ಟೈಮ್ಸ್ (1945) ದಿ ಡೇಲಿ ಮಿರರ್ (1948) ದಿ ಈವಿನಿಂಗ್ ನ್ಯೂಸ್ (1945),ಮನಿಲ ಡೇಲಿ ಬುಲೆಟಿನ್ (1900), ಫಿಲಿಪೀನ್ ಹೆರಾಲ್ಡ್ (1920)-ಇವು ಫಿಲಿಫೀನ್ಸಿನ ಪ್ರಮುಖ ಇಂಗ್ಲಿಷ್ ದೈನಿಕಗಳು. ತಾಲಿಬಾ ಪಿಲಿಪಿನೋ ಭಾಷಾಪತ್ರಿಕೆ. ಫೂಕೀನ್ ಟೈಮ್ಸ್ ಚೀನೀ ಭಾಷೆಯಲ್ಲಿ ಪ್ರಕಟವಾಗುತ್ತದೆ.

	ಪ್ರವಾಸೋದ್ಯಮ: 1972ರಲ್ಲಿ 1,66,000 ಪ್ರವಾಸಿಗಳು ಫಿಲಿಪೀನ್ಸಿಗೆ ಭೇಟಿ ನೀಡಿದರು. ಬೆಚ್ಚನೆಯ ಹವಾಗುಣ, ದ್ವೀಪಗಳ ಸುಂದರ ದೃಶ್ಯಗಳು, ಸಮುದ್ರತೀರ, ಜ್ವಾಲಮುಖಿಗಳು, ಮನಿಲ ನಗರದ ವೈಭವ-ಇವು ಪ್ರವಾಸಿಗಳನ್ನು ವಿಶೇಷವಾಗಿ ಆಕರ್ಷಿಸಿವೆ.	(ವಿ.ಜಿ.ಕೆ.)

	ಶಿಕ್ಷಣ ಪದ್ಧತಿ: ಫಿಲಿಫಿನ್ಸ್‍ನಲ್ಲಿ ಖಾಸಗಿ ಮತ್ತು ಸರ್ಕಾರದ ಎಲ್ಲ ಶಾಲಾ ಕಾಲೇಜುಗಳ ಆಡಳಿತ ಮತ್ತು ಮೇಲ್ವಿಚಾರಣೆ ಸರ್ಕಾರಕ್ಕೆ ಸೇರಿದೆ. ಅದು ತನ್ನ ಅನೇಕ ಕಚೇರಿಗಳ ಮೂಲಕ ಹಾಗೂ ನಿರ್ದೇಶಕರ ಮೂಲಕ ಈ ಕಾರ್ಯವನ್ನು ನಿರ್ವಹಿಸುತ್ತಿದೆ. ಈ ಎಲ್ಲ ಕಚೇರಿಗಳೂ ಸರ್ಕಾರದ ಶಿಕ್ಷಣ ಇಶಾಖೆಗೆ ಸೇರಿವೆ: ಸರ್ಕಾರಿ ಶಾಲೆಗಳ ಕಚೇರಿಯ ನಿರ್ದೇಶಕರು ಸರ್ಕಾರದ ಶಾಲೆಗಳ ಆಡಳಿತ ಮತ್ತು ಮೇಲ್ವಿಚಾರಣೆ ನಡೆಸುತ್ತಾರೆ. ಅವರಿಗೆ ಸಹಾಯ ಮಾಡಲು ವಿಭಾಗಾಧಿಕಾರಿಗಳು ವಿಷಯ ಪ್ರವೀಣರೂ ಇದ್ದಾರೆ. ಖಾಸಗಿ ಶಾಲೆಗಳ ನಿರ್ದೇಶಕರು ತಮ್ಮ ಶಾಲೆಗಳ ಆಡಳಿತ ಮತ್ತು ಮೇಲ್ವಿಚಾರಣೆ ನಡೆಸುತ್ತಾರೆ. ಪಠ್ಯಪುಸ್ತಕ ಮಂಡಲಿ, ಗ್ರಂಥಾಲಯ, ಮ್ಯೂಸಿಯಮ್ ಮುಂತಾದವುಗಳ ನಿರ್ದೇಶಕರೂ ಆಯಾ ಕ್ಷೇತ್ರದ ಆಡಳಿತ ಮತ್ತು ಮೇಲ್ವಿಚಾರಣೆ ನಡೆಸುತ್ತಾರೆ. ಇವೆಲ್ಲದರ ಕೆಲಸ ಕಾರ್ಯಗಳಲ್ಲಿ ಸಾಮಾನ್ಯ ನೀತಿಯನ್ನೂ ಸಮನ್ವಯವನ್ನೂ ಸಾಧಿಸಲು ರಾಷ್ಟ್ರೀಯ ಶಿಕ್ಷಣಮಂಡಲಿ ಸ್ಥಾಪನೆಯಾಗಿದೆ. ಇದಕ್ಕೂ ಪ್ರಾದೇಶಿಕ ಕಾಲೇಜುಗಳ ಹಾಗೂ ವಿಶ್ವವಿದ್ಯಾಲಯಗಳ ಆಡಳಿತ ಮಂಡಲಿಗಳಿಗೂ ರಾಜ್ಯ ಶಿಕ್ಷಣ ಸಚಿವರು ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ.

	ಸ್ಪೇನಿನ ಅನಂತರ ಅಮೆರಿಕ ಸಂಯುಕ್ತ ಸಂಸ್ಥಾನಗಳ ವಸಾಹತಾಗಿದ್ದ ಫಿಲಿಪೀನ್ಸಿನ ಶಿಕ್ಷಣದ ಇತಿಹಾಸದಲ್ಲಿ, ಆಯಾ ವಸಾಹತು ಸರ್ಕಾರ ಅಲ್ಲಿನ ಜನರಲ್ಲಿ ತಮ್ಮ ಉದ್ದೇಶಿತ ಸಂಸ್ಕøತಿ ಪ್ರಚಾರಕಾಂiÀರ್iಕ್ಕಾಗಿ ಶಿಕ್ಷಣವನ್ನು ಬಳಸಿಕೊಂಡ ಅಂಶ ಸ್ಪಷ್ಟವಾಗಿ ಕಾಣುತ್ತದೆ. ಸ್ಪೇನಿನ ಪಾದ್ರಿಗಳು ಮೊದಲ ಸ್ಥಾಪಿಸಿದ ಕೆಲವು ಚರ್ಚಿನ ಶಾಲೆಗಳು ಕ್ರೈಸ್ತಮತಕ್ಕೆ ಜನರನ್ನು ಸೇರಿಸಿಕೊಳ್ಳಲು ಕ್ರೈಸ್ತಮತದ ತತ್ತ್ವಗಳನ್ನು ಮಾತ್ರ ಬೋಧಿಸುತ್ತಿದ್ದುವು.

	16ನೆಯ ಶತಮಾನದ ಕೊನೆಗೆ ಸರ್ಕಾರ ಕೆಲವು ಸಮುದಾಯ ಶಾಲೆಗಳನ್ನು ಆರಂಭಿಸಿತು; ಅನಂತರ 1868ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿತು. ಆದರೆ ಅವು ಮುಖ್ಯವಾಗಿ ಜನರನ್ನು ಮತಾಂತರಗೊಳಿಸುವ ಕಾರ್ಯದಲ್ಲೇ ತೊಡಗಿದ್ದುವು. ಸ್ಪೇನಿನ ವಸಾಹತು ಆಡಳಿತ ಕೊನೆಗೊಳ್ಳುವವರೆಗೆ ಇದೇ ಸ್ಥಿತಿ ಮುಂದುವರಿಯಿತು.

	ಅಮೆರಿಕದ ವಸಾಹತು ಆಡಳಿತ ಬಂದ ಮೇಲೆ ಅಲ್ಲಿನವರಿಗೆ ಪ್ರಜಾಪ್ರಭುತ್ವ ಜೀವನದಲ್ಲಿ ತರಬೇತು ನೀಡವ ಮೂಲ ಉದ್ದೇಶದಿಂದ ಶಿಕ್ಷಣ ಪುನವ್ರ್ಯವಸ್ಥೆಗೊಂಡಿತು. ಅಮೆರಿಕದಲ್ಲಿ ಸಿದ್ಧಪಡಿಸಿದ ಪಠ್ಯಪುಸ್ತಕಗಳ ಮೂಲಕ ಅಮೆರಿಕದಿಂದ ಬಂದ ಅಧ್ಯಾಪಕರು ಇಂಗ್ಲಿಷ್ ಭಾಷೆಯ ಮೂಲಕ ಶಿಕ್ಷಣವೀಯುವ ಕಾರ್ಯ ಆರಂಭವಾಯಿತು. ಅವರು ಅಮೆರಿಕದ ಇತಿಹಾಸ, ಮುಖಂಡರ ಜೀವನ ಸಾಹಿತ್ಯ(ಇವನ್ನು ಬೋಧಿಸುತ್ತಿದ್ದರು. ಮಕ್ಕಳು ತಮ್ಮ ಮಾತೃ ಭಾಷೆಯನ್ನು ಶಾಲಾ ಸನ್ನಿವೇಶದಲ್ಲಿ ಆಡಲೂ ಬಿಡುತ್ತಿರಲಿಲ್ಲ.

	ಅನಂತರ ದೇಶ ಜಪಾನಿನ ವಸಾಹತಾದ ಮೇಲೆ ಅವರು ತಮ್ಮ ಸಂಸ್ಕøತಿಯನ್ನು ಅಲ್ಲಿನವರ ಮೇಲೆ ಬೀರಲು ಶಿಕ್ಷಣವನ್ನು ಬಳಸಿಕೊಂಡರು. ತಮ್ಮ ಮಹತ್ತ್ವಾಕಾಂಕ್ಷೆಯಾಗಿದ್ದ ಬೃಹತ್ ಏಷ್ಯ ರಾಷ್ಟ್ರಕಟ್ಟುವ ಯತ್ನಕ್ಕೆ ಅಲ್ಲಿನವರ ಮನೋಭಾವ ಒಗ್ಗುವಂತೆ ಮಾಡಲು ಶಿಕ್ಷಣವನ್ನು ಪುನವ್ರ್ಯವಸ್ಥೆಗೊಳಿಸಿ ಜಪಾನೀ ಭಾಷಾ ಮಾಧ್ಯಮವನ್ನು ಬಳಕೆಗೆ ತಂದರು. ಅದಕ್ಕನುಕೂಲಿಸುವಂತೆ ಅಧ್ಯಾಪಕರ ತರಬೇತಿ ಶಾಲೆಗಳನ್ನು ಪುನವ್ರ್ಯವಸ್ಥೆಗೊಳಿಸಿದರು.

	ಹೀಗೆ ಸ್ಪೇನ್, ಅಮೆರಿಕ, ಜಪಾನ್(ಈ ವಸಾಹತುಗಳು ಫಿಲಿಪೀನ್ಸಿನ ಜನತೆಯ ಹಿತವನ್ನು ಕಡೆಗಣಿಸಿ ತಮ್ಮ ತಮ್ಮ ಉದ್ದೇಶ ಸಾಧನೆಗೆಂದು ಶಿಕ್ಷಣನ್ನು ರೂಢಿಸಿಕೊಂಡ ಕಾರಣ ಅಲ್ಲಿನ ಶಿಕ್ಷಣಪದ್ಧತಿಯಲ್ಲಿ ಇತ್ತೀಚಿನವರೆಗೂ ಅಂಥ ಯಾವ ಮಹತ್ತರ ಸಾಧನೆಯೂ ಆಗಲಿಲ್ಲ. ಇದು ಗಣರಾಜ್ಯವಾಗಿ ಸ್ವತಂತ್ರ ರಾಷ್ಟ್ರವಾದ ಮೇಲೆ ತನ್ನ ಜನತೆಯ ಪುರೋಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣವನ್ನು ನೂತನವಾಗಿ ವ್ಯವಸ್ಥೆಗೊಳಿಸಿಕೊಳ್ಳಬೇಕಾಯಿತು.

	ಇಲ್ಲಿನ ಶಿಕ್ಷಣ 6 ವರ್ಷದ ಪ್ರಾಥಮಿಕ, 4 ವರ್ಷದ ಪ್ರೌಢ ಮತ್ತು 4 ವರ್ಷದ ಉನ್ನತ ಶಿಕ್ಷಣವಾಗಿ ವ್ಯವಸ್ಥೆಗೊಂಡಿದೆ. ಬಾಲಕ ಬಾಲಕಿಯರು 7 ವರ್ಷ ವಯಸ್ಸಾದಾಗ ಶಾಲೆಗೆ ಸೇರುತ್ತಾರೆ. ಹಾಗೆ ಸೇರುವುದು ಕಡ್ಡಾಯ ಮಾಡಲಾಗಿದ್ದರೂ ಆ ಕಾನೂನನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿಲ್ಲ. ತಕ್ಕಷ್ಟು ಶಾಲೆಗಳ ಅಭಾವವೇ ಇದಕ್ಕೆ ಕಾರಣ. ಪ್ರಾಥಮಿಕ ಶಾಲೆ ಎರಡು ಅಂತಸ್ತಿನಲ್ಲಿದೆ(4 ವರ್ಷದ ಕಿರಿಯ ಮತ್ತು 2 ವರ್ಷದ ಹಿರಿಯ ಪ್ರಾಥಮಿಕ ಶಾಲೆ( ಹೀಗೆ, ಸರ್ಕಾರ ಶಿಶುವಿಹಾರಗಳನ್ನು ಆರಂಭಿಸುತ್ತಿಲ್ಲ. ಖಾಸಗಿ ಸಂಸ್ಥೆಗಳು ಸ್ವಲ್ಪಮಟ್ಟಿಗೆ ಆ ಕಾರ್ಯ ನಡೆಸುತ್ತಿವೆ.

	ಪ್ರಾಥಮಿಕ ಶಿಕ್ಷಣ ಮುಗಿಸಿದವರು ಸಾಮಾನ್ಯ ಅಥವಾ ವೃತ್ತಿ ಪ್ರೌಢಶಾಲೆಗೆ ಸೇರುವರು. ಸಾಮಾನ್ಯ ಶಾಲೆಗಳು ವಿಶ್ವವಿದ್ಯಾನಿಲಯದ ಸಾಂಸ್ಕøತಿಕ ಶಿಕ್ಷಣಕ್ಕೂ ವೃತ್ತಿ ಮತ್ತು ತಾಂತ್ರಿಕ ಕಾಲೇಜುಗಳಿಗೂ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತವೆ. ತಾಂತ್ರಿಕ ಪ್ರೌಢಶಾಲೆಗಳೂ ಕೈಕಸಬು, ಕಲೆ, ಕೃಷಿ, ಮೀನುಗಾರಿಕೆ ಮುಂತಾದವುಗಳಲ್ಲಿ ಶಿಕ್ಷಣ ವೀಯುತ್ತವೆ.

	ನಾಲ್ಕು ವರ್ಷಗಳ ಉನ್ನತ ಶಿಕ್ಷಣ ಕಾಲೇಜುಗಳಲ್ಲಿ ಏರ್ಪಟ್ಟಿದೆ. ಕಲಾಶಾಸ್ತ್ರ ಅಥವಾ ವಿಜ್ಞಾನದ ಬ್ಯಾಚುಲರ್ ಪದವಿಗೆ ಅವು ಸಿದ್ಧಪಡಿಸುತ್ತವೆ. ಎಂಜಿನಿಯರಿಂಗ್ ಮತ್ತು ದಂತ ವೈದ್ಯ ಪದವಿಗೆ 5 ವರ್ಷ ವ್ಯಾಸಂಗಮಾಡಬೇಕು. ನ್ಯಾಯ ಶಾಸ್ತ್ರದ ಪದವಿಗೆ 7 ವರ್ಷವೂ ವೈದ್ಯ ಪದವಿಗೆ 8 ವರ್ಷವೂ ವ್ಯಾಸಂಗ ಮಾಡಬೇಕು. ಬ್ಯಾಚಿಲರ್ ಪದವಿಯ ಅನಂತರ ಮಾಸ್ಟರ್ ಪದವಿ ಒಂದು ಅಥವಾ ಎರಡು ವರ್ಷದ್ದು. ಇದನ್ನು ವಿಶ್ವವಿದ್ಯಾಲಯಗಳಲ್ಲೂ ಆರಿಸಿದ ಕೆಲವು ಕಾಲೇಜುಗಳಲ್ಲೂ ಏರ್ಪಡಿಸಿದೆ. ಪಿಎಚ್.ಡಿ. ತರಗತಿಗೆ ಸೇರತಕ್ಕ ವಿದ್ಯಾರ್ಥಿಗಳು ಕಡಿವೆ. ಅದಕ್ಕೆ ತಕ್ಕಷ್ಟು ಸೌಲಭ್ಯವುಳ್ಳ ಕಾಲೇಜುಗಳೂ ಅಷ್ಟಾಗಿ ಇಲ್ಲ.

	ಅಧ್ಯಾಪಕರ ಶಿಕ್ಷಣಕ್ಕಾಗಿ ಎರಡು ಅಂತಸ್ತಿನ ವ್ಯವಸ್ಥೆಯಿದೆ. ಪ್ರಾಥಮಿಕ ಶಾಲೆಗೆ ನಾರ್ಮಲ್ ಸ್ಕೂಲುಗಳೂ, ಪ್ರೌಢಶಾಲೆಗೆ ಶಿಕ್ಷಣದ ಕಾಲೇಜು ಇಲ್ಲವೇ ವಿಶ್ವವಿದ್ಯಾಲಯದ ಶಿಕ್ಷಣ ಶಾಸ್ತ್ರದ ವಿಭಾಗ ತರಬೇತು ನೀಡುತ್ತವೆ.

	ದೇಶದಲ್ಲಿ ಸುಮಾರು 40,000ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಿದ್ದರೂ. ಪ್ರೌಢಶಾಲೆಗಳ ಸಂಖ್ಯೆ ಕೇವಲ 500ಕ್ಕೂ ಕಡಿಮೆಯಾಗಿದೆ. ಮೇಲಿನ ಅಂತಸ್ತಿನಲ್ಲಿ ಶಿಕ್ಷಣ ಸೌಲಭ್ಯದಂತೆ ವಿದ್ಯಾರ್ಥಿ ಸಂಖ್ಯೆಯೂ ಕಡಿಮೆಯಾಗುತ್ತ ಬರುತ್ತಿದೆ. ಫಿಲಿಪೀನ್ಸ್‍ನಲ್ಲಿ ನಾಲ್ಕು ಸಾಂಸ್ಕøತಿಕ ಕಾಲೇಜುಗಳೂ, ನಾಲ್ಕು ಕೃಷಿಕಾಲೇಜುಗಳೂ, ಎಂಟು ವೃತ್ತ ಮತ್ತು ವಾಣಿಜ್ಯ ಶಿಕ್ಷಣದ ಕಾಲೇಜೂ ಇವೆ. ರಾಜಧಾನಿಯಾದ ಮನಿಲಾದಲ್ಲಿ ಒಂದು ವಾಣಿಜ್ಯ ಕಾಲೇಜು ಇದೆ.

	ಇಲ್ಲಿ 7 ವಿಶ್ವವಿದ್ಯಾಲಯಗಳಿವೆ. ಅವು ಕಲಾಶಾಸ್ತ್ರ ಮತ್ತು ವಿಜ್ಞಾನ ಶಾಸ್ತ್ರಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವೀಯುತ್ತವೆ. ಅವುಗಳಲ್ಲಿ ಮನಿಲಾದಲ್ಲಿರುವ 1908ರಲ್ಲಿ ಆರಂಭವಾದ ಫಿಲಿಪೀನ್ಸ್ ವಿಶ್ವವಿದ್ಯಾಲಯವೇ ಅತ್ಯಂತ ಹಳೆಯದು. ಇತರ ವಿಶ್ವವಿದ್ಯಾಲಯಗಳು, 1960ರಿಂದೀಚೆಗೆ ಆರಂಭವಾದವು. ಅವು ದೇಶದ ಆರ್ಥಿಕ ಪ್ರಗತಿಗೂ ಅಲ್ಲಿನ ಕ್ರೈಸ್ತ ಮತ್ತು ಮುಸ್ಲಿಂ ಜನತೆಯಲ್ಲಿ ಸಾಮರಸ್ಯ ಮೂಡಿಸುವುದಕ್ಕೂ ಮೀಸಲಾಗಿವೆಯೆಂದು ಹೇಳಲಾಗಿದೆ.

	ಫಿಲಿಪೀನ್ಸ್£ಲ್ಲಿ ಸರ್ಕಾರದ ಶಾಲಾ ಕಾಲೇಜುಗಳಂತೆ ಖಾಸಗಿ ಶಾಲಾ ಕಾಲೇಜುಗಳೂ ಸೇವೆ ಸಲ್ಲಿಸುತ್ತಿವೆ. ಶಿಶುವಿಹಾರದಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದ ಕಾಲೇಜುಗಳವರೆಗೂ ಅವುಗಳ ವ್ಯಾಪ್ತಿ. ಸರ್ಕಾರದ ಶಾಲಾಕಾಲೇಜುಗಳು ತಮ್ಮ ನಿರ್ವಹಣಾ ವೆಚ್ಚಕ್ಕೆ ಸರ್ಕಾರದ ಬೊಕ್ಕಸದಿಂದ ಹಣ ಪಡೆದುಕೊಂಡರೆ ಖಾಸಗಿ ಸಂಸ್ಥೆಗಳು ಧಾರ್ಮಿಕ ಅಥವಾ ಸಾಮಾಜಿಕ ಸಂಘ ಸಂಸ್ಥೆಗಳಿಂದಲೂ ಕಾರ್ಪೊರೇಷನ್‍ಗಳಿಂದಲೂ ಪಡೆದುಕೊಳ್ಳ್ಳುತ್ತವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಪ್ರೌಢ ಮತ್ತು ಉಚ್ಚ ಶಿಕ್ಷಣದ ಮಟ್ಟದಲ್ಲಿ ಅಧಿಕವಾಗಿವೆ.

	ಶಿಕ್ಷಣ ಶಾಖೆಯ ಸರ್ಕಾರಿ ಶಾಲಾ ಕಾಲೇಜುಗಳ ಆಡಳಿತಕ್ಕೆ ಮೀಸಲಾಗಿರುವ ಕಚೇರಿಯೇ ನೇರವಾಗಿ ವಯಸ್ಕರ ಶಿಕ್ಷಣದ ವ್ಯವಸ್ಥೆಯನ್ನೂ ನೋಡಿಕೊಳ್ಳುತ್ತದೆ. ಜನತೆಯಲ್ಲಿ ಬಹುತೇಕ ಮಂದಿ ಅನಕ್ಷರಸ್ಥರಿರುವುದರಿಂದ ಅದಕ್ಕಾಗಿ ಪ್ರತ್ಯೇಕ ವಯಸ್ಕರ ಅಕ್ಷರ ಪ್ರಚಾರಕೇಂದ್ರಗಳನ್ನೂ ಪ್ರಾಥಮಿಕ ಶಾಲೆಯನ್ನು ಮುಗಿಸದೆ ಬಿಟ್ಟವರಿಗಾಗಿ ಮುಂದುವರಿಕೆಯ ಶಿಕ್ಷಣಕ್ಕಾಗಿ ಸಂಸ್ಥೆಗಳನ್ನೂ ಅದು ನಡೆಸುತ್ತದೆ. ಗ್ರಾಮಾಂತರ ಯುವಜನಕ್ಕೆ ಮುಂದುವರಿದ ಉನ್ನತ ಶಿಕ್ಷಣ ಕೊಡುವ ಸಂಸ್ಥೆಗಳಿವೆ. ಸಂಸ್ಕøತಿ ಪ್ರಚಾರ, ರಾಜಕೀಯ ಪ್ರಜ್ಞೆ ಮತ್ತು ವೃತ್ತಿಶಿಕ್ಷಣ ಅಲ್ಲಿ ಕಲಿಸುವ ಮುಖ್ಯ ವಿಷಯಗಳು. ವಯಸ್ಕರ ಶಿಕ್ಷಣಕ್ಕೆ ನಿರ್ದಿಷ್ಟ ತರಗತಿಯ ಬೋಧನೆಯನ್ನು ಅನುಸರಿಸುವುದರ ಜೊತೆಗೆ ರೇಡಿಯೋ, ಟಿಲಿವಿಷನ್, ಚರ್ಚೆ, ಉಪನ್ಯಾಸ ಮುಂತಾದ ತಂತ್ರಗಳನ್ನೂ ಬಳಸಲಾಗುತ್ತದೆ.

	ಫಿಲಿಪೀನ್ಸಿನ ರಾಜ್ಯಾಂಗ ರಚನೆಯಲ್ಲಿ ಉಲ್ಲೀಖಿಸಿರುವಂತೆ ಅಲ್ಲಿನ ಶಾಲಾಕಾಲೇಜುಗಳು ಮಕ್ಕಳಲ್ಲಿ ನೈತಿಕ ಗುಣಶೀಲಗಳನ್ನೂ ಶಿಸ್ತು ಮತ್ತು ಆರ್ಥಿಕ ಸ್ವಾವಲಂಬನೆಯನ್ನೂ ಮೂಡಿಸಬೇಕು ಇದಕ್ಕಾಗಿ ಪ್ರಾಥಮಿಕ ಶಾಲೆಯಲ್ಲಿ ಓದುವುದು, ಬರೆಯುವುದು, ಅಂಕಗಣಿತ, ಸಮಾಜಪಾಠ, ಆರೋಗ್ಯ, ವಿಜ್ಞಾನ, ದೈಹಿಕ ಶಿಕ್ಷಣ(ಈ ವಿಷಯಗಳನ್ನು ಬೋಧಿಸಲಾಗುತ್ತದೆ. ನೀತಿಶಿಕ್ಷಣ ಮತ್ತು ಕಾರ್ಯಾನುಭವಕ್ಕೆ ಪ್ರಾಧಾನ್ಯವುಂಟು.

	ಭಾರತದಂತೆ ಫಿಲಿಪೀನ್ಸಿನಲ್ಲೂ ಭಾಷಾಭೋಧನೆ ಒಂದು ದೊಡ್ಡ ಸಮಸ್ಯೆಯಾಗಿದೆ ಪ್ರಾದೇಶಿಕ ಭಾಷೆ, ರಾಷ್ಟ್ರೀಯ ಭಾಷೆಯಾದ ಫಿಲಿಪೀನೊ ಮತ್ತು ಇಂಗ್ಲಿಷ್(ಇವು ಮೂರಕ್ಕೂ ಸ್ಥಾನ ಕಲ್ಪಿಸಬೇಕು. ಪ್ರಾಥಮಿಕ ಮೂರನೆಯ ತರಗತಿಯವರೆಗೆ ಪ್ರಾದೇಶಿಕ ಭಾಷೆಯನ್ನೂ ಅನಂತರ ಪ್ರೌಢಶಾಲೆಯ ಪೂರ್ತ ಫಿಲಿಪೀನೊ ಭಾಷೆಯನ್ನೂ ಬೋಧಿಸುವರು.  3ನೆಯ ತರಗತಿಯಿಂದ ಕಾಲೇಜಿನ ಕೊನೆಯವರೆಗೂ ಇಂಗ್ಲೀಷ್ ಭಾಷೆಯೇ ಮಾಧ್ಯಮ.

	ಪ್ರೌಢಶಾಲೆಯ ಪಠ್ಯಕ್ರಮ ವ್ಯಕ್ತಿಯ ಬೆಳವಣಿಗೆಯಂತೆ ಸಾಮಾಜಿಕ ಆವಶ್ಯಕತೆಯ ಕಡೆಗೂ ಗಮನವೀಯುತ್ತದೆ. ಮೊದಲೆರಡು ವರ್ಷ ವಿದ್ಯಾರ್ಥಿಯ ಅಭಿರುಚಿ ಆಸಕ್ತಿಗಳನ್ನು ಕಂಡುಕೊಳ್ಳುವ ಕಾರ್ಯಕ್ಕೆ ನೆರವಾಗುವ ಪಠ್ಯಕ್ರಮವೂ ಇನ್ನುಳಿದ ಎರಡು ವರ್ಷಗಳಲ್ಲಿ ಅವರವರ ಅಭಿರುಚಿಯನ್ನು ಬೆಳಸಬಲ್ಲ ಐಚ್ಚಿಕ ಪಠ್ಯಕ್ರಮವನ್ನು ಗೊತ್ತು ಮಾಡಲಾಗಿದೆ. ಮೊದಲೆರಡು ವರ್ಷಗಳಲ್ಲಿ ಪಠ್ಯಕ್ರಮ ಎಲ್ಲರಿಗೂ ಒಂದೇ ಆಗಿದ್ದು ಇಂಗ್ಲೀಷ್, ಫಿಲಿಪೀನೊ, ಸಮಾಜಪಾಠ, ವಿಜ್ಞಾನ, ಆರೋಗ್ಯ, ಕಾರ್ಯಾನುಭವ, ಗೃಹ ಅರ್ಥಶಾಸ್ತ್ರ, ಮುಂತಾದವನ್ನು  ಭೋಧಿಸುವರು. ಕಾಲೇಜಿಗೆ ಹೋಗತಕ್ಕವರು ಇಂಗ್ಲೀಷ್, ಗಣಿತ ಮತ್ತು ವಿಜ್ಞಾನದ ವಿಷಯಗಳನ್ನು ಆಳವಾಗಿ ವ್ಯಾಸಂಗ ಮಾಡುವರು. ವೃತ್ತಿ ವಿಷಯ ತೆಗೆದುಕೊಳ್ಳತಕ್ಕವರು ಶಾಲೆಯನ್ನು ಮುಗಿಸಿದ ಮೇಲೆ ಆ ವೃತ್ತಿಯಲ್ಲಿ ತೊಡಗುವರು. ವಾಹನ ಚಾಲನ, ಬಟ್ಟೆ ಹೊಲಿಯುವುದು, ಬಡಗಿ ಕೆಲಸ, ಹಡಗು ಕಟ್ಟುವುದು, ಮುದ್ರಣ, ಬೆಸುಗೆ ಕೆಲಸ, ಯಂತ್ರ ನಡೆಸುವುದು-ಇವೇ ಮುಂತಾದ ವೃತ್ತಿಗಳಲ್ಲಿ ತರಬೇತು ನೀಡಲಾಗುವುದು ಈ 2+2ರ ಪ್ರೌಢಶಾಲಾ ಯೋಜನೆ ಹಣದ ಅಭಾವದಿಂದಾಗಿ ಅನುಷ್ಠಾನಕ್ಕೆ ಬಂದಿಲ್ಲ.

	ಕಾಲೇಜುಗಳಲ್ಲೂ ವಿಶ್ವವಿದ್ಯಾಲಯಗಳಲ್ಲೂ ಕೆಲವು ವಿಷಯಗಳನ್ನು ಕಡ್ಡಾಯವಾಗಿ ಭೋಧಿಸÀಬೇಕೆಂಬ  ನಿಯಮವುಂಟು. ಸ್ಪ್ಯಾನಿಷ್ ಭಾಷೆ, ಫಿಲಿಪೀನ್ಸಿನ ಕಲೋಸಿರೈಸಲ್ ಎಂಬಾತನ ಜೀವನ ಮತ್ತು  ಕೃತಿಗಳು-ಇವನ್ನು ಕಡ್ಡಾಯವಾಗಿ ಬೋಧಿಸುವುದರ ಜೊತೆ ವೈದ್ಯ, ದಂತವೈದ್ಯ, ನ್ಯಾಯಶಾಸ್ತ್ರ, ಔಪಚಾರಿಕೆ, ಔಷಧಿ ನಿರ್ಮಾಣ-ಈ ವೃತ್ತಿವ್ಯಾಸಂಗದ ವಿದ್ಯಾರ್ಥಿಗಳಿಗೆ ಅಗತ್ಯವೆನಿಸುವ ವಿಷಯಗಳನ್ನು ಆಯಾ ವಿದ್ಯಾರ್ಥಿವರ್ಗಕ್ಕೆ ಬೋಧಿಸಬೇಕೆಂಬ ನಿಯಮವೂ ಉಂಟು. ಪಠ್ಯಕ್ರಮವನ್ನು ಸರ್ಕಾರದ ಶಿಕ್ಷಣ ಶಾಖೆ ರೂಪಿಸುತ್ತದೆ.

	ಅಧ್ಯಾಪಕರ ಶಿಕ್ಷಣ, ವಾಣಿಜ್ಯ, ವ್ಯವಹಾರವಿದ್ಯೆ, ನ್ಯಾಯ, ಎಂಜಿನಿಯರಿಂಗ್ ಮತ್ತು ತಂತ್ರಶಾಸ್ತ್ರ-ಇವು ಜನಪ್ರಿಯ ವೃತ್ತಿಗಳು. ಕಲಾಶಾಸ್ತ್ರ ಮತ್ತು ವಿಜ್ಞಾನ ಶಾಸ್ತ್ರವನ್ನೂ ಅನೇಕರು ವ್ಯಾಸಂಗ ಮಾಡುವರು. ಕಾಲೇಜಿಗೆ ಬರತಕ್ಕ ವಿದ್ಯಾರ್ಥಿಗಳಿಗೆ ತಕ್ಕಷ್ಟು ಸಿದ್ಧತೆ ದೊರಕದಿರುವುದು ಇಲ್ಲಿಯ ಶಿಕ್ಷಣ ವ್ಯವಸ್ಥೆಯಲ್ಲಿ ಕಂಡುಬರುವ ಪ್ರಧಾನ ದೋಷ.

	ದಿನದಿನಕ್ಕೂ ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ ಶಿಕ್ಷಣ ಸೌಲಭ್ಯವೊದಗಿಸುವುದೂ ಸಾಧ್ಯವಾಗುತ್ತಿಲ್ಲ. ಈಚೆಗೆ ಶಿಕ್ಷಣಕ್ಕಾಗಿ ರಾಷ್ಟ್ರದ ಅಯವ್ಯಯದಲ್ಲಿ  ಭಾಗವನ್ನು ಖರ್ಚು ಮಾಡಲಾಗುತ್ತಿದೆ. ಇದನ್ನು ಹೆಚ್ಚಿಸುವ ಯತ್ನವೂ ನಡೆಯುತ್ತಿದೆ.

	ಕಡ್ಡಾಯ ಶಿಕ್ಷಣದ ಕಾನೂನು ಆಚರಣೆಯಲ್ಲಿದ್ದರೂ ಅದನ್ನು ನಿಷ್ಠೆಯಿಂದ ಕಾರ್ಯರೂಪಕ್ಕೆ ತರದ ಪ್ರಯುಕ್ತ ಶಾಲೆಯನ್ನು ಮಧೈ ಬಿಟ್ಟು ಬಿಡುವವರ ಸಂಖ್ಯೆ ಹೆಚ್ಚುತ್ತಿದ್ದು ಶಿಕ್ಷಣದಲ್ಲಿ ವ್ಯರ್ಥವ್ಯಯ ಅಧಿಕವಾಗಹತ್ತಿದೆ. ಕಾಲೇಜು ಮಟ್ಟದಲ್ಲಿ ಶಿಕ್ಷಣವನ್ನು ಉತ್ತಮಪಡಿಸಲೋಸುಗ ಶಾಲಾ ಶಿಕ್ಷಣದ ಅವಧಿಯನ್ನು ಒಂದು ವರ್ಷಕ್ಕಿಂತ ಹೆಚ್ಚು ಮಾಡುವ ಯತ್ನವೂ ನಡೆಯುತ್ತಿದೆ.

	ಪೌಢಶಾಲಾಮಟ್ಟದಲ್ಲಿ ವಿದ್ಯಾರ್ಥಿಗಳು ಶಾಲೆಯನ್ನು ಬಿಟ್ಟುಬಿಡುತ್ತಿರುವರು. ಆ ವಯೋಮಾನದ ಸೇ. 28ರಷ್ಟು ವಿದ್ಯಾರ್ಥಿಗಳು ಮಾತ್ರ ಶಾಲೆಯಲ್ಲಿರುವರು. ಹಾಗೆ ಶಾಲೆ ಬಿಡುವವರಿಗೂ ಇತರರಿಗೂ ಪ್ರಾಥಮಿಕ ಶಾಲೆಗಳ ಕಟ್ಟಡಗಳನ್ನು ಬಳಸಿಕೊಂಡು ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಯುವಜನರಿಗೆ ಶಿಕ್ಷಣವೊದಗಿಸಲು ಬ್ಯಾರಿಯೋ ಶಾಲೆಗಳ ಸ್ಥಾಪನೆಯಾಗಿದೆ.

	ಇತ್ತೀಚಿನವರೆಗೂ ಸಂಶೋಧನೆಗಳ ಕಡೆ ದೇಶ ಬೆನ್ನು ತಿರುಗಿಸಿತ್ತು ವಿಶ್ವವಿದ್ಯಾಲಯಗಳೂ ಆ ಮುಖವಾಗಿ ಆಸಕ್ತಿ ವಹಿಸುತ್ತಿರಲಿಲ್ಲ. ಈಚೆಗೆ ಸಂಶೋಧನೆಗಳನ್ನು ಪ್ರೋತ್ಸಾಹಿಸಲು ರಾಷ್ಟ್ರೀಯ ಸಂಶೋಧನ ಮಂಡಲಿಯನ್ನು ಸ್ಥಾಪಿಸಲಾಗಿದೆ.
(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ